ಗೋಣಿಕೊಪ್ಪ ವರದಿ, ಡಿ. ೨೫: ರೈತ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿಕ ಸಮಾಜದ ವತಿಯಿಂದ ರೈತ-ವಿಜ್ಞಾನಿಗಳ ವಿಚಾರಗೋಷ್ಠಿ ಕಾರ್ಯಕ್ರಮ ಇಲ್ಲಿನ ಕೆವಿಕೆ ಸಭಾಂಗಣದಲ್ಲಿ ನಡೆಯಿತು.

ಪ್ರಗತಿಪರ ಕೃಷಿಕರಾದ ನಲ್ಲೂರು ಗ್ರಾಮದ ಸೋಮೇಂಗಡ ಗಣೇಶ್ ತಿಮ್ಮಯ್ಯ, ಹಳ್ಳಿಗಟ್ಟು ಗ್ರಾಮದ ರವಿಶಂಕರ್ ಅವರುಗಳನ್ನು ಸನ್ಮಾನಿಸಲಾಯಿತು.

ಸೋಮೇಂಗಡ ಗಣೇಶ್ ತಿಮ್ಮಯ್ಯ ಮಾತನಾಡಿ, ಸಮಗ್ರ ಕೃಷಿಯಿಂದ ಮಾತ್ರ ಆರ್ಥಿಕವಾಗಿ ಬೆಳವಣಿಗೆ ಸಾಧ್ಯವಿದೆ. ಏಕ ಬೆಳೆ ಪದ್ಧತಿಯಿಂದ ಆರ್ಥಿಕ ನಷ್ಟ ಉಂಟಾಗಿ, ಕೃಷಿಯಿಂದ ದೂರ ಉಳಿಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಗತಿಪರ ರೈತ ರವಿಶಂಕರ್ ಮಾತನಾಡಿ, ಭತ್ತ ಕೃಷಿಯಲ್ಲಿ ಬಿತ್ತನೆ ಬೀಜ ಒದಗಿಸಲು ಯೋಜನೆ ರೂಪಿಸುವುದರಿಂದ ಆರ್ಥಿಕವಾಗಿ ನಷ್ಟ ತಪ್ಪಲಿದೆ. ಯುವ ಸಮೂಹ ಹೆಚ್ಚು ಆಸಕ್ತಿ ತೋರಬೇಕು ಎಂದರು.

ಕೃಷಿಕ ಸಮಾಜದ ಅಧ್ಯಕ್ಷ ಚೋಟು ಕಾವೇರಪ್ಪ ಉದ್ಘಾಟಿಸಿ ಮಾತನಾಡಿ, ಯುವ ಸಮೂಹವನ್ನು ಕೃಷಿಯತ್ತ ಸೆಳೆಯಲು ಯೋಜನೆ ರೂಪಿಸಬೇಕಿದೆ. ಪ್ರೋತ್ಸಾಹ ಅಗತ್ಯ ಎಂದರು.

ಕೃಷಿ ಇಲಾಖೆ ಉಪ ನಿರ್ದೇಶಕ ಬಾಲರಾಜ್ ಮಾತನಾಡಿ, ಕೃಷಿ ಇಲಾಖೆ ವತಿಯಿಂದ ದೊರೆಯುತ್ತಿರುವ ಸೌಲಭ್ಯ ಪಡೆದುಕೊಳ್ಳಲು ರೈತರು ಉತ್ಸುಕತೆ ತೋರಬೇಕಿದೆ. ಸಾಕಷ್ಟು ಯೋಜನೆಗಳು ಕೃಷಿಕರಿಗೆ ಪೂರಕ ಪ್ರೋತ್ಸಾಹ ನೀಡುತ್ತಿದೆ ಎಂದರು.

ಕೆವಿಕೆ ಮುಖ್ಯಸ್ಥ ಡಾ. ಕಾಡ್ಯಮಾಡ ಎ. ದೇವಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಮೂರ್ತಿ, ಕೃಷಿ ಅಧಿಕಾರಿ ಎ.ಜೆ. ರೀನಾ, ಕೆವಿಕೆ ವಿಜ್ಞಾನಿಗಳಾದ ಡಾ. ವೀರೇಂದ್ರಕುಮಾರ್, ಡಾ. ಪ್ರಭಾಕರ್ ಇದ್ದರು.