ಮುಳ್ಳೂರು, ಡಿ. ೨೫: ಮೈಸೂರಿನ ಮ್ಯಾಥ್ ಜೂನಿಯರ್ ಸಂಸ್ಥೆ ಮತ್ತು ಶನಿವಾರಸಂತೆ ಹಾಗೂ ಹಂಡ್ಲಿ ಕ್ಲಸ್ಟರ್ ವತಿಯಿಂದ ಸಮೀಪದ ಶನಿವಾರಸಂತೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ವೇದ ಗಣಿತದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಮೈಸೂರಿನ ಮ್ಯಾಥ್ ಜೂನಿಯರ್ ಸಂಸ್ಥೆಯ ಸ್ಥಾಪಕ ಗಣಪತಿ, ಸಂಸ್ಥೆಯ ಶರಣ್ಯ ಮತ್ತು ವಿನುತ ಇವರುಗಳು- ವೇದ ಗಣಿತದ ವಿಶೇಷತೆ, ಇವುಗಳ ಉಪಯೋಗ, ವಿದ್ಯಾರ್ಥಿಗಳಿಗೆ ವೇದ ಗಣಿತದ ಜ್ಞಾನದಿಂದ ದೊರೆಯುವ ಲಾಭ, ವೇದ ಹಾಗೂ ಗಣಿತದ ನಡುವಿನ ಸಂಬAಧ ಮುಂತಾದವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ಬಳಿಕ ತರಗತಿಯ ಕಪ್ಪು ಹಲಗೆಯಲ್ಲಿ ವೇದ ಮತ್ತು ಗಣಿತವನ್ನು ಪ್ರಾಯೋಗಿಕವಾಗಿ ಬರೆದು ತೋರಿಸಿದರು. ಕಾರ್ಯಾಗಾರದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ವೇದ ಗಣಿತದ ಬಗ್ಗೆ ಉಪನ್ಯಾಸ ನೀಡಿದ ವಿಷಯದ ಕುರಿತು ಪರೀಕ್ಷೆ ನಡೆಸಿದರು. ನಂತರ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಾಗಾರದಲ್ಲಿ ಹಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶನಿವಾರಸಂತೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸರಕಾರಿ ಉರ್ದು ಪ್ರಾಥಮಿಕ ಶಾಲೆ ಮತ್ತು ಭಾರತಿ ಪ್ರೌಢಶಾಲೆ ಸೇರಿದಂತೆ ೫ ರಿಂದ ೧೦ನೇ ತರಗತಿವರೆಗಿನ ಸುಮಾರು ೧೫೦ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಾಗಾರದ ಲಾಭ ಪಡೆದುಕೊಂಡರು.
ಕಾರ್ಯಾಗಾರದಲ್ಲಿ ಹಂಡ್ಲಿ ಸರಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ನಳಿನಿ, ಶನಿವಾರಸಂತೆ ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್, ಶನಿವಾರಸಂತೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ್, ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಸೇವಂತಿ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ, ಭಾರತಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಮತ್ತು ವಿವಿಧ ಶಾಲೆಯ ಶಿಕ್ಷಕರು ಹಾಜರಿದ್ದರು.