ನಾಪೋಕ್ಲು, ಡಿ. ೨೩: ಭತ್ತದ ಬೆಳೆಯಿಂದ ರೈತರು ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿರುವ ರೈತರು ಇದೀಗ ಕಾಡುಹಂದಿಗಳ ಕಾಟದಿಂದ ಕಂಗಾಲಾಗುವAತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಕಾಡುಹಂದಿಗಳ ಪಾಲಾಗುತ್ತಿರುವುದರಿಂದ ‘ಕೈಗೆ ಬಂದ ತುತ್ತು ಬಾಯಿಗಿಲ್ಲ’ ಎಂಬAತಾಗಿದೆ ರೈತರ ಪರಿಸ್ಥಿತಿ.

ಚೆಯ್ಯಂಡಾಣೆ ಗ್ರಾಮ ಪಂಚಾಯಿತಿಯ ನರಿಯಂದಡ ಗ್ರಾಮದ ಸುತ್ತಮುತ್ತಲಲ್ಲಿ ಭತ್ತದ ಗದ್ದೆಗಳಿಗೆ ಕಾಡುಹಂದಿಗಳು ದಾಳಿ ಇಡುವ ಮೂಲಕ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಕೈಗೆಟುಕುವ ಸಮಯದಲ್ಲಿ ಕಾಡುಹಂದಿಗಳ ಪಾಲಾಗುತ್ತಿದೆ.

ಗ್ರಾಮದಲ್ಲಿ ನೂರರಲ್ಲಿ ಶೇಕಡ ಹತ್ತರಷ್ಟು ಮಂದಿ ಮಾತ್ರ ಭತ್ತದ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ರಾತ್ರಿ ಸಮಯದಲ್ಲಿ ಭತ್ತದ ಗದ್ದೆಗಳಿಗೆ ದಾಳಿ ಇಡುವ ಕಾಡುಹಂದಿಗಳು ಭತ್ತದ ಬೆಳೆಯನ್ನು ಸಂಪೂರ್ಣ ತಿಂದು ತುಳಿದು ಧ್ವಂಸಮಾಡುತ್ತಿವೆ. ನರಿಯಂದಡ ಗ್ರಾಮದ ತೋಟಂಬೈಲು ಅನಂತಕುಮಾರ್ ಎಂಬುವರು ಬೆಳೆದಿದ್ದ ಭತ್ತದ ಫಸಲು ಕಾಡುಹಂದಿಗಳ ಪಾಲಾಗಿದೆ. ಅನಂತಕುಮಾರ್ ಅವರ ಜೊತೆಗೆ ಗ್ರಾಮದ ರೈತರು ಭತ್ತದ ಕೃಷಿಯಿಂದ ವಿಮುಖರಾಗುವಂತಹ ಪರಿಸ್ಥಿತಿ ಬಂದೊದಗಿದೆ.

ಕಷ್ಟಪಟ್ಟು ಬೆಳೆದ ಕೃಷಿ ಫಸಲುಗಳು ಕಾಡುಪ್ರಾಣಿಗಳ ಹೊಟ್ಟೆ ಪಾಲಾಗುತ್ತಿದೆ. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರವೂ ದೊರಕದ ಕಾರಣ ಭತ್ತದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ದೊರೆಯದೇ ಇರುವುದರಿಂದ ರೈತರು ಭತ್ತ ಬೆಳೆಯುವುದನ್ನೇ ನಿಲ್ಲಿಸಿದರೂ ಅಚ್ಚರಿ ಇಲ್ಲ. -ದುಗ್ಗಳ ಸದಾನಂದ.