ಮಡಿಕೇರಿ, ಡಿ.೨೩ : ಕೊಡವ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳಿಗಾಗಿ ಅಥವಾ ೧೯೫೬ ರ ಹಿಂದಿನ ಸ್ಥಿತಿಯನ್ನು ಕೊಡಗಿನಲ್ಲಿ ಮರುಸ್ಥಾಪಿಸುವುದಕ್ಕಾಗಿ ಅಧ್ಯಯನ ನಡೆಸಲು ಆಯೋಗವೊಂದನ್ನು ರಚಿಸಬೇಕೆಂದು ಮಾಜಿ ಕೇಂದ್ರ ಸಚಿವ ಹಾಗೂ ಖ್ಯಾತ ಅರ್ಥ ಶಾಸ್ತçಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಗೃಹ ಕಾರ್ಯದರ್ಶಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು ಕೊಡವ ಬುಡಕಟ್ಟು ಸಮುದಾಯವನ್ನು ಆಡಳಿತ ವ್ಯವಸ್ಥೆ ನಿರ್ಲಕ್ಷಿಸುತ್ತಿದ್ದು, ಕೊಡಗಿನಲ್ಲಿ ೧೯೫೬ ರ ಹಿಂದಿನ ಗತವೈಭವ ಮರುಸ್ಥಾಪಿಸಲು ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಕೊಡವ ಸಮುದಾಯವನ್ನು ಕಡೆಗಣಿಸುತ್ತಲೇ ಬಂದರೆ ಜನಾಂಗದ ಇತಿಹಾಸ ಮತ್ತು ಸಂಸ್ಕೃತಿಯ ಕುರುಹು ಮರೆಯಾಗುವ ಎಲ್ಲಾ ಸಾಧ್ಯತೆಗಳಿದೆ. ಕಳೆದ ಹಲವು ವರ್ಷಗಳಿಂದ ನಂದಿನೆರವAಡ ಯು.ನಾಚಪ್ಪ ಅವರ ನೇತೃತ್ವದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಈ ಸಂಘಟನೆಯ ಕಾನೂನು ಬದ್ಧ ಬೇಡಿಕೆಗಳನ್ನು ಪರಿಶೀಲಿಸಿ ಆಯೋಗವನ್ನು ರಚಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸವಿಂಧಾನದ ೬ ನೇ ಶೆಡ್ಯೂಲ್ ಪ್ರಕಾರ ಕೊಡವ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳ ಅನುಷ್ಠಾನ, ಕೊಡವ ಬುಡಕಟ್ಟು ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು, ಸಿಖ್ ರ ಕಿರ್ಫಾಣ್ ಮಾದರಿಯಲ್ಲಿ ಕೊಡವ ಸಾಂಪ್ರದಾಯಿಕ ಜನಾಂಗೀಯ ‘ಸಂಸ್ಕಾರ ತೋಕ್’ ಗನ್ನ ಹಕ್ಕುಗಳನ್ನು ಸಂವಿಧಾನದ ೨೫ ಮತ್ತು ೨೬ ನೇ ವಿಧಿಗಳಡಿಯಲ್ಲಿ ರಕ್ಷಿಸಬೇಕು ಹಾಗೂ ಸ್ಥಳೀಯ ಭಾಷೆ ಅಂದರೆ ‘ಕೊಡವ ಥಕ್’ ಅನ್ನು ೮ ನೇ ಶೆಡ್ಯೂಲ್ನಲ್ಲಿ ಸೇರಿಸಬೇಕು. ಈ ಬೇಡಿಕೆಗಳನ್ನು ಈಡೇರಿಸಲು ಆಯೋಗ ರಚನೆ ಸೂಕ್ತ ಮಾರ್ಗವಾಗಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗಮನ ಸೆಳೆದಿದ್ದಾರೆ. ಪ್ರಸ್ತುತ ಅಸ್ಸಾಂ ಮತ್ತು ಮೇಘಾಲಯದಲ್ಲಿ ೧೦ ಸ್ವಾಯತ್ತ ಪ್ರದೇಶಗಳಿವೆ. ಲಡಾಖ್, ಮಿಜೋರಾಂ ಮತ್ತು ತ್ರಿಪುರಾ ಆರನೇ ಶೆಡ್ಯೂಲ್ನ ಬಲದಿಂದ ರೂಪುಗೊಂಡಿವೆ. ಇದೇ ಮಾದರಿಯಲ್ಲಿ ಕೊಡವ ಹೋಂ ಲ್ಯಾಂಡ್ ಮೂಲಕ ೧೯೫೬ ರ ಹಿಂದಿನ ಇತಿಹಾಸವನ್ನು ಮರುಸ್ಥಾಪಿಸಬೇಕಾಗಿದೆ.
ನಮ್ಮ ದೇಶದಾದ್ಯಂತ ವೈವಿಧ್ಯಮಯ ಜನರ ಭೌಗೋಳಿಕ-ರಾಜಕೀಯ ಆಕಾಂಕ್ಷೆಗಳು ಮತ್ತು ಅಸಂಖ್ಯಾತ ಭಾಷಾ ಗುಂಪುಗಳ ಸಾಂಸ್ಕೃತಿಕ ನೀತಿಗಳಿಗೆ ಅವಕಾಶ ಕಲ್ಪಿಸಲು ಕಾಲಕಾಲಕ್ಕೆ ನಡೆಯುತ್ತಿರುವ ಸಾಂವಿಧಾನಿಕ ಶಾಸನಗಳು, ತಿದ್ದುಪಡಿಗಳ ಇತಿಹಾಸವಿದೆ. ಇದು ನಿರಂತರ ಮತ್ತು ಅಂತ್ಯವಿಲ್ಲದ ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಯನ್ನು ಕೂಡ ಪರಿಶೀಲಸಬೇಕಾಗಿದೆ. ಇದಕ್ಕಾಗಿ ಆಯೋಗ ರಚನೆ ಆಗಲೇಬೇಕೆಂದು ಡಾ.ಸುಬ್ರಮಣಿಯನ್ ಸ್ವಾಮಿ ಪತ್ರದಲ್ಲಿ ವಿವರಿಸಿದ್ದಾರೆ.