ರೈತರು ಕಂಗಾಲು

*ಸಿದ್ದಾಪುರ, ಡಿ. ೨೩: ಕೊಡಗಿನಲ್ಲಿ ಈಗ ಭತ್ತದ ಕೊಯ್ಲಿನ ಸಮಯ, ಗದ್ದೆ ತುಂಬಾ ಫಸಲಿದ್ದು, ಕೊಯ್ಲು ಹಂತದಲ್ಲೇ ಕಾಡಾನೆಗಳು ದಾಳಿ ಮಾಡುತ್ತಿವೆ. ಕೈಗೆ ಬಂದ ಫಸಲು ಕಾಡಾನೆಯ ಹೊಟ್ಟೆ ಸೇರುತ್ತಿದ್ದು, ರೈತಾಪಿ ವರ್ಗ ಕಂಗಾಲಾಗಿದೆ.

ಭತ್ತದ ಕಣಜವೆಂದೇ ಹೆಸರಾಗಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಭತ್ತ ನಾಪತ್ತೆಯಾಗುತ್ತಿದೆ. ಹಲವು ಸಮಸ್ಯೆಗಳ ನಡುವೆ ಅಲ್ಪಸ್ವಲ್ಪ ಗದ್ದೆಯಲ್ಲಿ ವಿರಳ ಸಂಖ್ಯೆಯ ಕೃಷಿಕರು ಭತ್ತ ಬೆಳೆಸು ತ್ತಿದ್ದಾರೆ. ದುಬಾರಿ ನಿರ್ವಹಣೆ, ಹವಾಗು ಣದಲ್ಲಿನ ವ್ಯತ್ಯಾಸ ಮತ್ತು ವನ್ಯಜೀವಿಗಳ ದಾಳಿಯಿಂದ ಕಂಗೆಟ್ಟಿರುವ ರೈತರು ಭತ್ತದ ಕೃಷಿಯನ್ನೇ ಕೈಬಿಡುವ ಆಲೋಚನೆ ಯಲ್ಲಿ ತೊಡಗಿದ್ದಾರೆ. ಮಂಗಗಳು ದಾಳಿ ಮಾಡಿ ಕಾಫಿ ಹಣ್ಣನ್ನು ನಾಶ ಮಾಡುತ್ತಿದ್ದರೆ, ಕಾಡಾನೆಗಳು ಭತ್ತದ ಫಸಲನ್ನು ತಿಂದು ತೇಗುತ್ತಿವೆ. ಕೊಡಗಿನ ಹಲವು ಕಡೆ ಇದೇ ಸಮಸ್ಯೆ ಕಾಡುತ್ತಿದ್ದು, ತ್ಯಾಗತ್ತೂರು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಸ್ಥಳೀಯ ಕೃಷಿಕ ಪ್ರದೀಪ್, ಮುಂಡ್ರಮನೆ ಎಂ.ಎA.ಶಿವಕುಮಾರ್ ಹಾಗೂ ಇವರ ಕುಟುಂಬದವರ ಗದ್ದೆಗಳಿಗೆ ದಾಳಿ ಮಾಡಿರುವ ಎರಡು ಕಾಡಾನೆಗಳು ಕೊಯ್ಲು ಮಾಡಿದ್ದ ಭತ್ತದ ಫಸಲನ್ನು ಸಂಪೂರ್ಣವಾಗಿ ನಾಶ ಮಾಡಿವೆ.

ಗದ್ದೆಗೂ ಹಾನಿಯಾಗಿದ್ದು, ಅಪಾರ ನಷ್ಟ ಅನುಭವಿಸಿರುವ ಇವರುಗಳು ಮುಂದಿನ ದಿನಗಳಲ್ಲಿ ಭತ್ತದ ಕೃಷಿ ಮಾಡುವುದಾದರು ಹೇಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವನ್ಯಜೀವಿಗಳ ದಾಳಿಯಿಂದ ಫಸಲು ಕಳೆದುಕೊಳ್ಳುವ ರೈತರಿಗೆ ತ್ವರಿತವಾಗಿ ಸೂಕ್ತ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಬೇಕು ಮತ್ತು ಕಾಡಾನೆ ಹಾವಳಿ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. - ಅಂಚೆಮನೆ ಸುಧಿ