ಕಣಿವೆ, ಡಿ. 22: ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತಾ ರೂಢರ ಆಸಕ್ತಿ ಕೊರತೆಯಿಂದ ನಾಗಾಲೋಟದಲ್ಲಿ ಬೆಳವಣಿಗೆ ಯಲ್ಲಿರುವ ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದೊಳಗೆ ಒಂದೇ ಒಂದು ಸುಂದರವಾದ ಉದ್ಯಾನವಿಲ್ಲ. ಕಳೆದ ಒಂದೂವರೆ ದಶಕಗಳ ಹಿಂದೆ ಊರಿಗೊಬ್ಬಳೆ ನಾರಿ ಎಂಬಂತೆ ಕಾವೇರಿ ಬಡಾವಣೆಯಲ್ಲಿ ನಿರ್ಮಾಣ ಗೊಂಡಿದ್ದ ಊರಿನ ಸುಂದರ ಉದ್ಯಾನವನ ಇಂದು ಬೀಡಾಡಿ ದನಗಳ ಹುಲ್ಲುಗಾವಲಾಗಿ ಮಾರ್ಪಟ್ಟಿದೆ.

ನಿರ್ವಹಣೆಯ ಕೊರತೆ ಯಿಂದಾಗಿ ಆಗಿಂದಾಗ್ಗೆ ಬೀಡಾಡಿ ದನಗಳು ಈ ಉದ್ಯಾನದೊಳಗೆ ನುಗ್ಗಿ ಅದರೊಳಗೆ ನವಿರು ನವಿರಾಗಿದ್ದ ಹಸಿರು ಹುಲ್ಲಿನ ಜೊತೆಗೆ ಚಿಗುರೊಡೆದು ಬೆಳವಣಿಗೆ ಹಂತದಲ್ಲಿರುವ ಹೂ ಗಿಡಗಳನ್ನು ತಿಂದು ಹಾಳು ಮಾಡುತ್ತಿದ್ದು ಇದರಿಂದಾಗಿ ಉದ್ಯಾನದ ಅಂದ ಚೆಂದ ಹಾಳಾಗಿದೆ. ಪಂಚಾಯಿತಿಯ ಬೇಜವಬ್ದಾರಿ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಜನಾಕರ್ಷಣೆಯಾಗಬೇಕಿದ್ದ ಉದ್ಯಾನ ಬೀಡಾಡಿ ದನಗಳ ಕೇಂದ್ರವಾಗಿ ಮಾರ್ಪಟ್ಟಿದೆ.

ಮುಕ್ಕಾಲು ಎಕರೆ ವಿಶಾಲ ಪ್ರದೇಶದಲ್ಲಿ ಕಳೆದ ಹದಿನೈದು ವರ್ಷಗಳ ಹಿಂದೆ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಡಿ ರೂ. 20 ಲಕ್ಷ ವೆಚ್ಚದೊಂದಿಗೆ ನಿರ್ಮಾಣವಾಗಿದ್ದ ಉದ್ಯಾನ ಇಂದು ಹೇಳ ಹೆಸರಿಲ್ಲದಂತಾಗುತ್ತಿದೆ.

ನೀರು ನೆರಳು ಏನೂ ಇಲ್ಲ

ನಿತ್ಯವೂ ಹಸಿರಿನೊಂದಿಗೆ ಕಂಗೊಳಿಸಬೇಕಿದ್ದ ಉದ್ಯಾನಕ್ಕೆ ಸರಿಯಾದ ನೀರಿನ ವ್ಯವಸ್ಥೆಯಿಲ್ಲದೆ ಇಲ್ಲಿನ ಗಿಡಗಳು ಬೆಳವಣಿಗೆ ಯಾಗುತ್ತಿಲ್ಲ.

ಹದಿನೈದು ವರ್ಷಗಳಲ್ಲಿ ಒಂದಾದರೂ ಗಿಡ ಬೆಳೆದು ಹೆಮ್ಮರವಾಗಿ ನೆರಳಿನ ಜೊತೆಗೆ ಶುದ್ಧ ಆಮ್ಲಜನಕ ನೀಡಬೇಕಿತ್ತು. ಆದರೆ ಪಂಚಾಯಿತಿಯ ಆಡಳಿತಾರೂಢರ ದೂರದೃಷ್ಟಿಯ ಕೊರತೆಯಿಂದ ಈ ಉದ್ಯಾನ ಬಟಾ ಬಯಲಾಗಿದ್ದು ಒಣಗಿ ನಿಂತ ಹೊಲದಂತಾಗಿದೆ.

ಸೂಕ್ತ ನಿರ್ವಹಣೆ ಕೊರತೆ

ಉದ್ಯಾನವನ್ನು ನಿರ್ಮಿಸಿದ ಆರಂಭದಲ್ಲಿ ಇದರ ನಿರ್ವಹಣೆ ಗೆಂದು ಪಂಚಾಯಿತಿಯಿಂದ ಓರ್ವ ಮಹಿಳೆಯನ್ನು ನೇಮಿಸಲಾಗಿತ್ತು. ಆ ಮಹಿಳೆ ಇಲ್ಲಿನ ಗಿಡಗಳಿಗೆ ನೀರುಣಿಸುವ ಜೊತೆಗೆ ಬೀಡಾಡಿ ದನಗಳು ಒಳ ನುಸುಳದಂತೆ ಕಾವಲಾಗಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಕಾವಲಿದ್ದ ಮಹಿಳೆಯನ್ನು ಪಂಚಾಯಿತಿಯ ಕಚೇರಿಯ ಕೆಲಸಕ್ಕೆ ನಿಯೋಜಿಸುವ ಮೂಲಕ ಈ ಉದ್ಯಾನವನ್ನು ಕಡೆಗಣಿಸಲಾಗಿದೆ.

ಒಂದೇ ಒಂದು ಉದ್ಯಾನವಿಲ್ಲ

ಸುಮಾರು 25 ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳ 60ಕ್ಕೂ ಹೆಚ್ಚಿನ ಬಡಾವಣೆಗಳನ್ನು ಹೊಂದಿರುವ ತಾಲೂಕು ಕೇಂದ್ರ ಕುಶಾಲನಗರದಲ್ಲಿ ಒಂದೇ ಒಂದು ಸುಂದರ ಉದ್ಯಾನವಿಲ್ಲ. ಹಿಂದಿನ ಆಡಳಿತ ಮಂಡಳಿಯಲ್ಲಿ ಉದ್ಯಾನವನ ಅಭಿವೃದ್ಧಿಗೆಂದು ಕೋಟ್ಯಂತರ ರೂ. ಗಳು ಬಿಡುಗಡೆ ಆದರೂ ಕೂಡ ಊರಿನ ಅಂದ - ಚೆಂದವನ್ನು ನವಿರಾಗಿಸುವ ಸುಂದರವಾದ ಉದ್ಯಾನವನ್ನು ಮಾಡಲು ಯಾವ ಜನಪ್ರತಿನಿಧಿಯೂ ಮುಂದಾಗಲಿಲ್ಲ.

ವಾಯುವಿಹಾರಿಗಳ ಬೇಸರ

ದಿನೇ ದಿನೇ ಬೆಳವಣಿಗೆಯಲ್ಲಿ ರುವ ಕುಶಾಲನಗರ ಪಟ್ಟಣದಲ್ಲಿ ಇರುವ ಹಿರಿಯ ನಿವಾಸಿಗಳು, ಮಕ್ಕಳು ಹಾಗೂ ಮಹಿಳೆಯರ ಮನವನ್ನು ಅರಳಿಸುವಂತಹ ಒಂದೇ ಒಂದು ಉದ್ಯಾನವಾಗಲೀ, ಕೆರೆಯ ತೀರವಾಗಲೀ ಇಲ್ಲದ್ದರಿಂದ ಇಲ್ಲಿನ ವಾಯುವಿಹಾರಿಗಳು ಆಡಳಿತ ವ್ಯವಸ್ಥೆಯ ವಿರುದ್ಧ ಬೇಸರ ವ್ಯಕ್ತಪಡಿಸುವಂತಾಗಿದೆ.

ಇನ್ನಾದರೂ ಮುಂದಾಗುವರೇ

ಪಂಚಾಯಿತಿಯ ಅಧ್ಯಕ್ಷರಾಗಿ ರುವ ಜಯವರ್ಧನ ಅವರು ಇನ್ನಾದರೂ ಈ ಉದ್ಯಾನದ ಸೂಕ್ತ ನಿರ್ವಹಣೆಗೆ ಮುಂದಾಗುವ ಮೂಲಕ ಜನರಿಗೆ ಬೇಕಾದ ಸುಂದರ ಉದ್ಯಾನವನ್ನು ರೂಪಿಸಲು ಯೋಜನೆ ಹಾಕಿಕೊಳ್ಳಬೇಕಿದೆ. ಅಂದರೆ ಮೊದಲಿದ್ದ ಹಾಗೆ ಒಬ್ಬರು ಕಾವಲುಗಾರರನ್ನು ಈ ಉದ್ಯಾನಕ್ಕೆ ನಿಯೋಜಿಸುವ ಮೂಲಕ ಇದರ ಸೌಂದರ್ಯವೃದ್ಧಿಗೆ ಯೋಜನೆ ಹಾಕಿಕೊಳ್ಳಬೇಕಿದೆ.

ಬೀಡಾಡಿ ದನಗಳು ಒಳ ನುಸುಳದಂತೆ ಪ್ರತ್ಯೇಕವಾದ ತಿರುಗುವ ಗೇಟನ್ನು ಅಳವಡಿಸಿದ್ದಲ್ಲಿ ಬೀಡಾಡಿ ದನಗಳು ಒಳನುಸುಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಈ ಉದ್ಯಾನಕ್ಕೆ ಪ್ರತ್ಯೇಕ ನೀರಾವರಿ ವ್ಯವಸ್ಥೆ ಕಲ್ಪಿಸಿ ಸಮರ್ಪಕವಾದ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕೆಂದು ಊರಿನ ಹಿರಿಯ ನಿವಾಸಿ ವಿ.ಎನ್. ವಸಂತಕುಮಾರ್ ಹಾಗೂ ಎಂ.ಹೆಚ್. ನಜೀರ್ ಅಹಮದ್ ಅವರು ಕೋರಿದ್ದಾರೆ.

- ಕೆ.ಎಸ್.ಮೂರ್ತಿ