ಡಿ.ವೈ.ಎಸ್.ಪಿ. ಗಂಗಾಧರಪ್ಪ
ಸುAಟಿಕೊಪ್ಪ, ಡಿ. ೨೩: ದೈವಾರಾಧನೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು ದೈವಾರಾಧಕರು ಸಾರ್ವಜನಿಕರನ್ನು ತಿದ್ದುವ ಕೆಲಸ ಮಾಡುತ್ತಾ, ಪುರಾತನ ಅಚಾರ-ವಿಚಾರ, ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಕುಶಾಲನಗರ ವೃತ್ತದ ಡಿವೈಎಸ್‌ಪಿ ಗಂಗಾಧರಪ್ಪ ಹೇಳಿದರು.
ಸುಂಟಿಕೊಪ್ಪದ ಗುಂಡುಗುಟ್ಟಿ ಮಂಜುನಾಥಯ್ಯ ಕಲ್ಯಾಣ ಮಂಟಪದಲ್ಲಿ ಕೊಡಗು ಜಿಲ್ಲಾ ಬುದ್ಧ ಪ್ರತಿಷ್ಠಾನದ ವತಿಯಿಂದ ಸುಂಟಿಕೊಪ್ಪ ಹೋಬಳಿಯ ದೈವಾರಾಧಕರು, ದೈವದೇವತೆಗಳ ನರ್ತಕರಿಗೆ ಏರ್ಪಡಿಸಲಾದ ಗೌರವ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಉಡಾಯಿಸುವಾಗಲೂ ದೇವರಿಗೆ ಪೂಜೆ ಸಲ್ಲಿಸಿ ಆನಂತರ ಉಡಾಯಿಸುತ್ತಾರೆ. ದೀಪ ಬೆಳಗಿಸದೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಕಾರ್ಯ ಮಾಡುವುದಿಲ್ಲ. ದೈವಾರಾಧಕರನ್ನು ಗುರುತಿಸುವ ಮಹತ್ವದ ಕೆಲಸವನ್ನು ಬುದ್ಧ ಪ್ರತಿಷ್ಠಾನದವರು ನೇರವೇರಿಸಿದ್ದು ಶ್ಲಾಘನೀಯವಾದುದು ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಕೊಡಗು ಜಿಲ್ಲಾ ಗತವಿಧಿ ಸಾಮರಸ್ಯ ವೇದಿಕೆ ಸಂಯೋಜಕ ಡಿ. ನರಸಿಂಹ ಮಾತನಾಡಿ, ಕರಾವಳಿ ಭಾಗದ ಜನರು ದೈವಾರಾಧನೆ ಭೂತಾರಾಧನೆಯಿಂದ ಕೊಡಗಿನಲ್ಲಿಯೂ ಬದುಕನ್ನು ಕಟ್ಟಿಕೊಂಡಿದ್ದಾರೆ. ದೈವಾರಾಧಕರನ್ನು ನಂಬಿದ ಜನರಿಗೆ ಸೂಕ್ತ ಪರಿಹಾರ, ಆರೋಗ್ಯ, ಐಶ್ವರ್ಯ ಲಭಿಸುತ್ತಿದೆ. ಇವರನ್ನು ಗುರುತಿಸುವ ಕೆಲಸ ಈಗಲಾದರೂ ಮಾಡಿರುವುದು ಸಂತಸ ತಂದಿದೆ ಎಂದರು.
ಪತ್ರಕರ್ತ ಹೆಚ್.ಎಂ. ರಘು ಕೋಟಿ ಮಾತನಾಡಿ, ದೈವಾರಾಧಕರು ಸಮಾಜದಲ್ಲಿ ತಮ್ಮದೇ ರೀತಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ದೈವಾರಾಧಕರ ಕೊಡುಗೆ ಮಹತ್ವದ್ದು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಬುದ್ಧ ಪ್ರತಿಷ್ಠಾನದ ಧರ್ಮಾಧಿಕಾರಿ ಹೆಚ್.ಪಿ. ಶಿವಕುಮಾರ್ ವಹಿಸಿ ಮಾತನಾಡಿದರು. ೨೦ ಮಂದಿ ಪುರುಷರು ಸೇರಿದಂತೆ ಮಹಿಳಾ ದೈವಾರಾಧಕರನ್ನು ಇದೇ ಸಂದರ್ಭ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಹೆಚ್.ಟಿ. ಕಾವೇರಪ್ಪ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಡಿ. ಸಂತೋಷ್, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತ ಹೆಚ್.ಎಸ್. ಬೆಟ್ಟಪ್ಪ ಉಪಸ್ಥಿತರಿದ್ದರು. ಭವ್ಯ ಪ್ರಾರ್ಥಿಸಿ, ಶಿವಣ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.