ಆಲೂರು-ಸಿದ್ದಾಪುರ, ಡಿ. ೨೩: ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಹಾಸನ ಜಿಲ್ಲೆಯ ಯಸಳೂರು, ಆಲೂರು ಮೀಸಲು ಅರಣ್ಯದಿಂದ ಲಗ್ಗೆ ಇಡುತ್ತಿವೆ. ಇದರಿಂದ ಫಸಲಿಗೆ ಬಂದ ಕಾಫಿ ಸೇರಿದಂತೆ ಇನ್ನಿತರ ಬೆಳೆಗಳು ಕಾಡಾನೆಗಳ ಪಾಲಾಗುತ್ತಿವೆ.

ಶನಿವಾರಸಂತೆ ಹೋಬಳಿಯ ದುಂಡಳ್ಳಿ, ಕಾಜೂರು, ಮಾದ್ರೆ, ಅಪ್ಪಸೆಟ್ಟಳ್ಳಿ, ಚಿಕ್ಕಕೊಳತ್ತೂರು, ಬಿಳಹ ಮುಂತಾದ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಅಧಿಕವಾಗಿದೆ. ಶನಿವಾರಸಂತೆ ಅರಣ್ಯ ವಲಯದಲ್ಲಿ ೧೫ ರಿಂದ ೨೦ ಕಾಡಾನೆಗಳು ಸಂಚರಿಸುತ್ತಿದ್ದು, ಸುಮಾರು ೩ ರಿಂದ ೪ ಕಾಡಾನೆಗಳು ಹಂಡ್ಲಿ ಹಾಗೂ ದುಂಡಳ್ಳಿ ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ರಾತ್ರಿ ವೇಳೆಯಲ್ಲಿ ಕಾಡಾನೆ ಹಿಂಡು ತೋಟ-ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವುದರಿಂದ ಗ್ರಾಮದ ರೈತರು ಕಂಗಾಲಾಗಿದ್ದಾರೆ. ಶನಿವಾರಸಂತೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಕಂದಕ ನಿರ್ಮಿಸಿದೆ. ಹಾಸನ ಜಿಲ್ಲೆಗೆ ಸೇರಿದ ಯಸಳೂರು, ಆಲೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಂದಕ ನಿರ್ಮಿಸದಿರುವುದರಿಂದ ಅಲ್ಲಿಂದ ಬರುವ ಕಾಡಾನೆಗಳು ಸುಲಭವಾಗಿ ಕೊಡಗು ಜಿಲ್ಲೆಯ ಗಡಿ ಗ್ರಾಮಗಳಿಗೆ ನುಸುಳುವುದರಿಂದ ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಲು ಕಾರಣವಾಗಿದೆ.

ಬುಧವಾರ ಬೆಳಗಿನ ಜಾವ ಹಾಗೂ ಗುರುವಾರ ಶನಿವಾರಸಂತೆ ಅರಕಲಗೂಡು ರಸ್ತೆಯಲ್ಲಿ ಹಾಗೂ ಕೊಡ್ಲಿಪೇಟೆ ಶನಿವಾರಸಂತೆ ಮುಖ್ಯ ರಸ್ತೆಯಲ್ಲಿ ಯಾವುದೇ ಭಯವಿಲ್ಲದೆ ಕಾಡಾನೆಗಳು ಸಂಚರಿಸಿದ್ದು, ಕಾಫಿ ತೋಟಗಳಿಗೆ ಹಾಗೂ ಕಾಫಿ ಕಣದಲ್ಲಿದ್ದ ಒಣಗಿದ ಕಾಫಿ ತಿನ್ನುತ್ತಿರುವುದರಿಂದ ತೋಟಗಳಲ್ಲಿ ಕೆಲಸ ಸ್ಥಗಿತಗೊಳಿಸಿದ್ದಾರೆ.

ಕಾಡಾನೆ ಸಮಸ್ಯೆ ಈ ಹಿಂದೆ ಇರಲಿಲ್ಲ. ಬುಧವಾರ ರಾತ್ರಿ ನಮ್ಮ ಕಣದಲ್ಲಿದ್ದ ಒಣಗಲು ಹಾಕಿದ್ದ ಕಾಫಿಯನ್ನು ತಿಂದು ನಷ್ಟಪಡಿಸಿದೆ. ಮೂರು ಕಾಡಾನೆಗಳು ಮನೆಯ ಮುಂಭಾಗದ ಕಣಕ್ಕೆ ಯಾವುದೇ ಭಯವಿಲ್ಲದೆ ಬಂದಿವೆ. ಕಾಫಿ ತೋಟಗಳಿಗೆ ಕಾರ್ಮಿಕರು ಬರಲು ಭಯಪಡುತ್ತಿದ್ದಾರೆ ಎಂದು ಕೆರಳ್ಳಿಯ ಕಾಫಿ ಬೆಳೆಗಾರ ಚಂದ್ರಶೇಖರ್ ತಿಳಿಸಿದ್ದಾರೆ.

-ದಿನೇಶ್ ಮಾಲಂಬಿ