ವೀರಾಜಪೇಟೆ, ಡಿ. 22: ನಗರದ ಮಲೆತಿರಿಕೆ ಬೆಟ್ಟದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹೋತ್ಸವವು ತಾ. 25ರಿಂದ ಜ.1ರವರೆಗೆ ನಡೆಯಲಿದೆ.
ಜ.1ರ ಸಂಜೆ ಶ್ರೀ ಅಯ್ಯಪ್ಪ ಸ್ವಾಮಿಯ ಕಥಾ ಸಾರುವ ಸ್ಥಬ್ದ ಚಿತ್ರದೊಂದಿಗೆ ಬೃಹತ್ ಶೋಭಾಯಾತ್ರೆಯೊಂದಿಗೆ ಕೊನೆಯಾಗಲಿದೆ ಎಂದು ಶ್ರೀ ಅಯ್ಯಪ್ಪ ಸೇವಾ ಸಮಿತಿ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ. ತಾ.25ರಂದು ಸಂಜೆ 6-30ಕ್ಕೆ ಕ್ಷೇತ್ರಪಾಲ ಗುಳಿಗನ ಪೂಜೆ, ತಾ.26ರಂದು ಬೆಳಿಗ್ಗೆ ಧ್ವಜಾರೋಹಣ ಹಾಗೂ 7-30ಕ್ಕೆ ವರದ ವಿನಾಯಕ ಸೇವಾ ಸಮಿತಿಯಿಂದ ಮಂಡಲ ಪೂಜೆ ನಡೆಯಲಿದೆ. ತಾ.30 ಮತ್ತು ತಾ.31ರಂದು ಬೆಳಿಗ್ಗೆ ಮತ್ತು ರಾತ್ರಿ ವಿಶೇಷ ಪೂಜೆಗಳು ಜರುಗಲಿವೆÉ. ಜ.1ರಂದು ಪ್ರಾಥ:ಕಾಲ 5.30ಕ್ಕೆ ಗಣಪತಿ ಹೋಮ, ಲಕ್ಷ್ಮೀ ಪೂಜೆ, ಸರಸ್ವತಿ ಪೂಜೆ, ತುಲಭಾರ, 10 ಗಂಟೆಗೆ ಲಕ್ಷಾರ್ಚನೆ, 12.30 ಕ್ಕೆ ಶ್ರೀ ಸ್ವಾಮಿಗೆ ಮಾಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಜ.1ರಂದು ಸಂಜೆ 6.30ಕ್ಕೆ ಬೃಹತ್ ಶೋಭಾಯತ್ರೆಯಲ್ಲಿ ದೀಪಾರತಿ, ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಮಣಿಕಂಠನ ಕಥಾ ಸಾರಾಂಶವನ್ನು ಸಾರುವ ಚಲನವಲನಗಳಿಂದ ಕೂಡಿದ ಸ್ಥಬ್ದ ಚಿತ್ರ ಕೇರಳ ಚಂಡೆ, ಮಂಗಳೂರಿನ ಚಿಲಿ-ಪಿಲಿ ಬೊಂಬೆ ಮಾಲಧಾರಿಗಳು, ವಿಶೇಷ ಭಜನಾ ತಂಡಗಳು ಮೆರವಣಿಗೆಗೆ ಸಾತ್ ನೀಡಲಿವೆÉ. ಮೆರವಣಿಗೆಯು ಸಂಜೆ ಮಲೆತಿರಿಕೆ ಬೆಟ್ಟದ ತಪ್ಪಲಿನಿಂದ ಆರಂಭಗೊಂಡು ಮುಖ್ಯ ಬೀದಿಗಳಲ್ಲಿ ಸಾಗಿ ಮಲಭಾರ್ ರಸ್ತೆಯಲ್ಲಿರುವ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದಲ್ಲಿ ಕೊನೆಗೊಳ್ಳಲಿದೆ. ಮೆರವಣೆಗೆ ಕೊನೆಯಾದ ನಂತರ ದೇಗುಲದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆಗಳು ಸಲ್ಲಿಕೆಯಾಗಲಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯ ಕಾರಣ ಯಾವುದೇ ವಿಶೇಷ ಪೂಜೆಗಳು ನಡೆಯದಿರುವುದರಿಂದ ಪ್ರಸ್ತುತ ವರ್ಷದಲ್ಲಿ ದೇವಾಲಯದ ಆಡಳಿತ ಮಂಡಳಿಯು ವಿಜೃಂಭಣೆಯಿಂದ ಶ್ರೀ ಅಯ್ಯಪ್ಪ ಸ್ವಾಮಿಯ ವಾರ್ಷಿಕ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದೆ.