ವರದಿ: ಚಂದ್ರಮೋಹನ್

ಕುಶಾಲನಗರ, ಡಿ. 22 : ದುಬಾರೆ ಸಾಕಾನೆ ಶಿಬಿರದ ಐದು ಸಾಕಾನೆಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಜಿಲ್ಲೆಯ ಸಾಕಾನೆಗಳಿಗೆ ಬೇಡಿಕೆ ಹಿನ್ನೆಲೆಯಲ್ಲಿ ದುಬಾರೆ ಶಿಬಿರದ ಜನರಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ವಾಲಿ ಮತ್ತು ಲವ ಹಾಗೂ ಹಾರಂಗಿ ಸಾಕಾನೆ ಶಿಬಿರದ ಮಾರುತಿ ಆನೆಗಳನ್ನು ಲಾರಿಗಳ ಮೂಲಕ ಮಧ್ಯಪ್ರದೇಶಕ್ಕೆ ಸಾಗಿಸಲಾಯಿತು.

ಆನೆಗಳ ತಂಡವನ್ನು ಕರೆದೊಯ್ಯುವ ಸಂಬಂಧ ಮಧ್ಯಪ್ರದೇಶದ ಹಿರಿಯ ಅರಣ್ಯಾಧಿಕಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮತ್ತು ವನ್ಯಜೀವಿ ತಜ್ಞರುಗಳು ಸೇರಿದಂತೆ 8 ಜನರ ತಂಡ ಕಳೆದ 2 ದಿನಗಳಿಂದ ಕುಶಾಲನಗರದಲ್ಲಿ ತಂಗಿ, ಸಾಕಾನೆಗಳ ವೈದ್ಯಕೀಯ ಪರೀಕ್ಷೆ ಮತ್ತು ಆನೆಗಳ ಸಾಗಾಟಕ್ಕೆ ಅವಶ್ಯಕತೆ ಇರುವ ದಾಖಲೆಗಳ ಸಿದ್ಧತೆಯಲ್ಲಿ ತೊಡಗಿಸಿಕೊಂಡಿತ್ತು.

ದುಬಾರೆ ಶಿಬಿರದ ಆನೆ ಮಾವುತರು, ಕಾವಾಡಿಗರಾದ ಸತೀಶ, ಕಿರಣ, ನಯಾಜ್, ಅನೀಲ್, ರಾಜಣ್ಣ, ನವೀನ್, ಭರತ್, ಸುನೀಲ್ ಆನೆಗಳೊಂದಿಗೆ ಮಧ್ಯಪ್ರದೇಶಕ್ಕೆ ತೆರಳಿದ್ದಾರೆ.

15 ದಿನಗಳ ಕಾಲ ಅಲ್ಲಿನ ಇಲಾಖೆ ಸಿಬ್ಬಂದಿಗಳಿಗೆ ಸಾಕಾನೆಗಳ ಬಗ್ಗೆ ತರಬೇತಿ ನೀಡಿ, ಮಾವುತರು, ಕಾವಾಡಿಗರು ಮತ್ತೆ ಶಿಬಿರಕ್ಕೆ ಹಿಂತಿರುಗಲಿದ್ದಾರೆ. ಲಾರಿಗೆ ತಮ್ಮ ಸಹಚರರನ್ನು ಲಾರಿಗೆ ಹತ್ತಿಸಲು ಶಿಬಿರದ ಇತರ ಆನೆಗಳು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು.

ಜನರಲ್ ಕಾರ್ಯಪ್ಪ (8) ಮತ್ತು ಜನರಲ್ ತಿಮ್ಮಯ್ಯ (8), ವರ್ಷ ಪ್ರಾಯದ ಆನೆಗಳಾಗಿದ್ದು, ಇವುಗಳು ದುಬಾರೆ ಸಾಕಾನೆ ಶಿಬಿರದಲ್ಲಿ ಹುಟ್ಟಿದ್ದು, ಈ ಆನೆಗಳ ತಾಯಿ ಕಪಿಲ ಮತ್ತು ಶಿವಗಂಗೆಯನ್ನು 2018 ರಲ್ಲಿ ಉತ್ತರ ಪ್ರದೇಶದ ಛತ್ತೀಸ್‍ಗಡಕ್ಕೆ ಸ್ಥಳಾಂತರಿಸಲಾಗಿತ್ತು. ವಾಲಿ (40) ಆನೆಯನ್ನು 2014 ರಲ್ಲಿ ಭೂತನಕಾಡು ಅರಣ್ಯದಲ್ಲಿ ಹಿಡಿದು ಪಳಗಿಸಲಾಗಿತ್ತು. ಲವ (21) ಆನೆಯನ್ನು 2016 ರಲ್ಲಿ ಸಿದ್ದಾಪುರ ಬಳಿ ಅರಣ್ಯದಿಂದ ಸೆರೆ ಹಿಡಿಯಲಾಗಿತ್ತು. ಮಾರುತಿ (20) ತಮಿಳುನಾಡು ಗಡಿಭಾಗದ ಬಂಡೀಪುರ ಅರಣ್ಯದಿಂದ ತಂದು ಶಿಬಿರದಲ್ಲಿ ಪಳಗಿಸಲಾಗಿತ್ತು. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ ಪೂವಯ್ಯ ಅವರು ಮಧ್ಯಪ್ರದೇಶದ ಅಧಿಕಾರಿಗಳಿಗೆ 5 ಆನೆಗಳ ದಾಖಲೆಗಳನ್ನು ಹಸ್ತಾಂತರಿಸಿದರು. ದುಬಾರೆ ಸಾಕಾನೆ ಶಿಬಿರದಲ್ಲಿ ಒಟ್ಟು 37 ಆನೆಗಳಿದ್ದು, 6 ಆನೆಗಳನ್ನು ಹಾರಂಗಿ ಆನೆ ಪಾರ್ಕ್‍ನಲ್ಲಿ ಬಿಡಲಾಗಿತ್ತು. ಇದೀಗ ದುಬಾರೆಯಲ್ಲಿ 21 ಮತ್ತು ಹಾರಂಗಿಯಲ್ಲಿ 5 ಆನೆಗಳನ್ನು ಕಾಣಬಹುದು.

ಕೊಡಗು- ಮೈಸೂರು ಭಾಗದ ಸಾಕಾನೆಗಳು ಸೇರಿದಂತೆ ಕರ್ನಾಟಕ ರಾಜ್ಯದ ಆನೆಗಳಿಗೆ ಇತರ ರಾಜ್ಯಗಳಿಂದ ಭಾರಿ ಬೇಡಿಕೆ ಇದೆ ಎಂದು ಕೊಡಗು ಅರಣ್ಯ ವೃತ್ತದ ಸಂರಕ್ಷಣಾಧಿಕಾರಿ ಬಿ.ಎನ್ ನಿರಂಜನ ಮೂರ್ತಿ ತಿಳಿಸಿದ್ದಾರೆ. ಕೊಡಗು - ಮೈಸೂರು ವೃತ್ತದ ಅರಣ್ಯಗಳಲ್ಲಿ ಒಟ್ಟು 55 ಸಾಕಾನೆಗಳಿದ್ದು, ಇದರಲ್ಲಿ 5 ಆನೆಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಿಂದ ಹೆಚ್ಚಿನ ಬೇಡಿಕೆಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಪೆಂಚ್ ಟೈಗರ್ ರಿಸರ್ವ್‍ಗೆ ಕರ್ನಾಟಕ ರಾಜ್ಯದಿಂದ ಒಟ್ಟು 14 ಆನೆಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಮಧ್ಯಪ್ರದೇಶದ ಹಿರಿಯ ಅರಣ್ಯಾಧಿಕಾರಿ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶದಿಂದ ಅಗತ್ಯವಿರುವ ಲಾರಿಗಳನ್ನು ತರಿಸಲಾಗಿದ್ದು, ಆನೆ ಸಾಗಾಟ ಸಂದರ್ಭ ವಿಶೇಷವಾಗಿ ಗಮನ ಹರಿಸಲಾಗುತ್ತಿದೆ. ಹಗಲು ಸಂಚಾರ ಕೈಗೊಳ್ಳಲಾಗುತ್ತಿದ್ದು, ರಾತ್ರಿ ವೇಳೆ ವಿಶ್ರಾಂತಿ ತೆಗೆದುಕೊಳ್ಳಲಾಗುವುದು. ವನ್ಯಜೀವಿ ತಜ್ಞರೊಂದಿಗೆ ಔಷಧಿ ಹಾಗೂ ಆಹಾರ ವ್ಯವಸ್ಥೆ ಸಮರ್ಪಕವಾಗಿ ಸಿದ್ಧತೆ ಕೈಗೊಳ್ಳಲಾಗಿದೆ. ಕುಶಾಲನಗರದಿಂದ ಮೈಸೂರು, ಬೆಂಗಳೂರು ಮೂಲಕ ಅನಂತಪುರ ಮಾರ್ಗವಾಗಿ ಹೈದರಾಬಾದ್, ನಾಗಪುರ ಮೂಲಕ ಸುಮಾರು 1600 ಕಿ.ಮೀ ಮಾರ್ಗ ಮೂಲಕ ಸಂಚಾರ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು. 3 ರಿಂದ 4 ದಿನಗಳ ಕಾಲ ಪ್ರಯಾಣ ಸಾಗುವುದು ಎಂದು ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ. ದುಬಾರೆಯಲ್ಲಿ ಆನೆಗಳನ್ನು ಬೀಳ್ಕೊಡುವ ಸಂದರ್ಭ ವನ್ಯಜೀವಿ ತಜ್ಞ ಡಾ. ಚಿಟ್ಟಿಯಪ್ಪ ಎಸಿಎಫ್ ಎ.ಎ ಗೋಪಾಲ್, ಕುಶಾಲನಗರ ಅರಣ್ಯ ವಲಯಾಧಿಕಾರಿ ಕೆ.ವಿ. ಶಿವರಾಮ್, ದುಬಾರೆ ಶಿಬಿರದ ಉಸ್ತುವಾರಿ ಅಧಿಕಾರಿ ಕನ್ನಂಡ ರಂಜನ್ ಶಿಬಿರದ ಮಾವುತ, ಕಾವಾಡಿಗ ಮತ್ತಿತರರು ಶಿಬಿರದಿಂದ ತೆರಳಿದ ಆನೆಗಳಿಗೆ ವಿದಾಯ ಹೇಳಿದರು.