ಮಡಿಕೇರಿ, ಡಿ.22: ಗ್ರಂಥಗಳು ಯುವ ಜನತೆಗೆ ಜ್ಞಾನ ಹಾಗೂ ಮಾರ್ಗದರ್ಶನ, ವೃದ್ಧಾಪ್ಯದಲ್ಲಿ ಮನರಂಜನೆ ನೀಡುವ ಜೊತೆಗೆ ಜನತೆಯ ಬದುಕು ಕಟ್ಟಿಕೊಡುತ್ತವೆ ಎಂದು ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅಭಿಮತ ವ್ಯಕ್ತಪಡಿಸಿದರು.

ಸಾಮರಸ್ಯ ವೇದಿಕೆ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಮುನ್ನಡೆಸಿದ ರಾಷ್ಟ್ರ ತಪಸ್ವಿ ಶ್ರೀ ಗುರೂಜಿ ಅವರ ಕುರಿತು ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಾಮಾಜಿಕ ತಲ್ಲಣ, ರಾಜಕೀಯ ವಿಪ್ಲವಗಳಿಂದ ಯುವಜನತೆ ಗುರು ಹಾಗೂ ಗುರಿ ಇಲ್ಲದೆ ದಾರಿ ತಪ್ಪುತ್ತಿದ್ದರೆ ಅಂತಹವರಿಗೆ ಪುಸ್ತಕಗಳು ದಾರಿದೀಪವಾಗುತ್ತವೆ. ರಾಷ್ಟ್ರ ತಪಸ್ವಿ ಶ್ರೀ ಗುರೂಜಿ ಪುಸ್ತಕದ ಲೇಖಕ ಚಂದ್ರಶೇಖರ ಭಂಡಾರಿ ರಾಷ್ಟ್ರಜ್ಯೋತಿಯನ್ನು ಬೆಳಗಿಸಿದವರು. ಭವ್ಯ ಭಾರತದ ಕನಸು ಕಂಡಿದ್ದ ಅವರ ಕನಸು ನನಸು ಮಾಡೋಣ ಎಂದು ಕರೆ ನೀಡಿದರು.

ಪುಸ್ತಕದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಮಾತನಾಡಿ ಮನುಷ್ಯರಿಗೆ ತಮ್ಮ ವ್ಯಕ್ತಿತ್ವದಿಂದ ಗೌರವ ಸಿಗುತ್ತವೆ, ಆವರಣದೊಳಗಿನ ಹೂರಣದಿಂದ ವ್ಯಕ್ತಿತ್ವ ನಿರ್ಮಾಣ ಆಗುತ್ತವೆ, ಅದೇ ರೀತಿ ಹೂರಣದಿಂದ ಪುಸ್ತಕಕ್ಕೆ ಬೆಲೆ ಸಿಗುತ್ತದೆ. ಭಾರತದಲ್ಲಿ ವ್ಯಕ್ತಿ ಪೂಜೆ ಅವಕಾಶವಿಲ್ಲ, ನಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ವ್ಯಕ್ತಿ ಪೂಜೆ ಮಿತಿ ಮೀರಿದಾಗ ವ್ಯಕ್ತಿಯೂ ದಾರಿ ತಪ್ಪುತ್ತಾನೆ, ಸಂಘಟನೆಯೂ ದಾರಿ ತಪ್ಪುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರ ತಪಸ್ವಿ ಶ್ರೀ ಗುರೂಜಿ ಪುಸ್ತಕದಲ್ಲಿ ವ್ಯಕ್ತಿ ಪೂಜೆ, ಸ್ತುತಿ, ಪ್ರಶಂಸೆಯೂ ಇಲ್ಲ, ಬದಲಾಗಿ ಗುರೂಜಿ ಅವರ ಜೀವನ ವ್ಯಕ್ತಿತ್ವದ ಅನಾವರಣ ಆಗಿದೆ. ವ್ಯಕ್ತಿ ಪೂಜೆ ಒಳ ನುಸುಳದಂತೆ ಗುರೂಜಿ ಸಂಘಟನೆ ಮಾಡಿದ್ದಾರೆ, ಸಂಘಟನೆ ಅನಿವಾರ್ಯ ಆಗಬೇಕು, ಸ್ವದೇಶಿ, ಸ್ವಭೂಷ, ಸ್ವಭಾಷೆ ನಮ್ಮ ಜೀವನದ ಆದ್ಯತೆ ಆಗಬೇಕು. ಆತ್ಮ ನಿಂದನೆ ಆಗಬಾರದು, ಇತರರಿಗೆ ಕೊಡುವ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ರೀತಿಯಲ್ಲಿ ಬದುಕಿದವರು ಶ್ರೀ ಗುರೂಜಿ, ಪ್ರತಿಯೊಬ್ಬರೂ ದೇಶಭಕ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸು. ರಾಮಣ್ಣ ಹೇಳಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ್ ಚಕ್ಕೇರ ಮನು ಕಾವೇರಪ್ಪ ಇದ್ದರು.

ಕಾರ್ಯಕ್ರಮದಲ್ಲಿ ಪಶ್ಚಿಮಘಟ್ಟಗಳ ಅಭಿವೃದ್ಧಿ ಇಲಾಖೆಯ ಮಾಜಿ ಅಧ್ಯಕ್ಷ ರವಿಕುಶಾಲಪ್ಪ, ಯೋಗ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್, ಸೇವಾ ಭಾರತಿ ಜಿಲ್ಲಾಧ್ಯಕ್ಷ ಟಿ.ಸಿ. ಚಂದ್ರನ್, ಕಾರ್ಯದರ್ಶಿ ತಿರುಮಲೇಶ್ ಭಟ್, ಪ್ರಮುಖರಾದ ತಮ್ಮಪ್ಪ, ಜಿ.ಟಿ. ರಾಘವೇಂದ್ರ, ಶಿವಾಜಿ ಹಾಗೂ ಇನ್ನಿತರರು ಇದ್ದರು.

ಧನಂಜಯ ಮತ್ತು ಪವನ್ ವಸಿಷ್ಠ ಸ್ವಾಗತಿಸಿ, ಪರಿಚಯ ಮಾಡಿದರೆ, ಪದ್ಮಪ್ರಿಯ ಮತ್ತು ಶ್ರೇಯಸ್ ಸ್ವರ್ಗೀಯ ಚಂದ್ರಶೇಖರ ಭಂಡಾರಿ ಅವರು ಬರೆದ ಧರೆಗವ ತರಿಸಿದೆ ಸ್ವರ್ಗದ ಸ್ಪರ್ಧಿಯು ಗೀತೆಯನ್ನು ಹಾಡಿದರು. ಕೆ.ಕೆ.ದಿನೇಶ್ ಕುಮಾರ್ ವಂದಿಸಿದರೆ, ಚಂದ್ರ ಉಡೋತ್ ಕಾರ್ಯಕ್ರಮ ನಿರೂಪಿಸಿದರು.