ಬೆಳಗಾವಿ, ಡಿ. 22 : ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ರೂ.7.5 ಲಕ್ಷ ಪರಿಹಾರಧನವನ್ನು ರೂ.15 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಕಾಡಾನೆ ಹಾವಳಿ ಹೆಚ್ಚಿರುವ ಚಿಕ್ಕಮಗಳೂರು, ಹಾಸನ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಗಜ ಕಾರ್ಯಪಡೆ (ಎಲೆಫೆಂಟ್ ಟಾಸ್ಕ್ ಫೋರ್ಸ್) ರಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ವಿಧಾನಪರಿಷತ್ ಕಲಾಪದಲ್ಲಿ ಶಾಸಕ ಪ್ರಾಣೇಶ್.ಎಂ.ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವರು ಉತ್ತರಿಸಿದರು.

ಕಾಡಾನೆ ಹಾಗೂ ಇತರೆ ವನ್ಯಪ್ರಾಣಿಗಳು ಕಾಡಿನಿಂದ ಹೊರಬಾರದಂತೆ ತಡೆಯಲು ವನ್ಯಪ್ರಾಣಿಗಳಿಗಾಗಿ ಅರಣ್ಯ ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತ ಅರಣ್ಯಗಳಲ್ಲಿ ಕೆರೆಗಳ ನಿರ್ಮಾಣ ಹಾಗೂ ಇರುವ ಕೆರೆಗಳ ಪುನಶ್ಚೇತನಗೊಳಿಸಲಾಗಿದೆ.

ಕಾಡು ಪ್ರಾಣಿಯಿಂದ ಉಂಟಾಗುವ ಶಾಶ್ವತ ಅಂಗವಿಕಲತೆಗೆ ನೀಡುತ್ತಿದ್ದ ಪರಿಹಾರಧನ ಮೊತ್ತವನ್ನು ರೂ. 5 ರಿಂದ ರೂ. 10 ಲಕ್ಷಕ್ಕೆ, ಭಾಗಶಃ ಅಂಗವಿಕಲತೆ ಮೊತ್ತವನ್ನು ರೂ. 2.50 ಲಕ್ಷದಿಂದ ರೂ. 5 ಲಕ್ಷಕ್ಕೆ, ಗಾಯಗೊಂಡವರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.30 ಸಾವಿರದಿಂದ ರೂ.60 ಸಾವಿರಕ್ಕೆ, ಆಸ್ತಿ ನಷ್ಟದ ಮೊತ್ತವನ್ನು ರೂ.10 ಸಾವಿರದಿಂದ ರೂ.20 ಸಾವಿರಕ್ಕೆ ಹಾಗೂ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಧನಾತ್ಮಕ ಪರಿಹಾರದ ಜೊತೆಗೆ 5 ವರ್ಷದ ಅವಧಿ ನೀಡುತ್ತಿದ್ದ ಮಾಶಾಸನ ಮೊತ್ತ ರೂ.2 ಸಾವಿರವನ್ನು ರೂ.4 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.