ಮಡಿಕೇರಿ, ಡಿ. 22: ಮಡಿಕೇರಿ ಸನಿಹದ ಗ್ರಾಮವೊಂದರಲ್ಲಿ ಕಳೆದ 1946ರ ಅವಧಿಯಲ್ಲಿ ದೇವಾಲಯವೊಂದಕ್ಕೆ ನೀಡಲ್ಪಟ್ಟ ಜಾಗದ ಪೈಕಿ ಸುಮಾರು 27 ಎಕರೆಯಷ್ಟು ಆಸ್ತಿಯನ್ನು ಇದೀಗ ರಾಜ್ಯ ಸರ್ಕಾರದ ಹೆಸರಿಗೆ ಖಾತೆ ವರ್ಗಾಯಿಸಲು ಭೂ ನ್ಯಾಯ ಮಂಡಳಿ ಸಭೆಯಲ್ಲಿ ಅಂತಿಮವಾಗಿ ನಿರ್ಧರಿಸಲಾಗಿದೆ.

ಮಡಿಕೇರಿಯ ಐತಿಹಾಸಿಕ ದೇವಾಲಯವಾದ ಶ್ರೀ ಓಂಕಾರೇಶ್ವರನಿಗೆ ಭಕ್ತ ಮಹಿಳೆಯೊಬ್ಬರು ಸುಮಾರು 30 ಎಕರೆ ಜಾಗವನ್ನು ವಿಲ್‍ನಲ್ಲಿ ಬರೆಯುವ ಮೂಲಕ ಉದಾರವಾಗಿ ನೀಡಿದ್ದರೂ ಕೂಡ ಕಾನೂನಾತ್ಮಕ ತೊಡಕಿನಿಂದಾಗಿ ಈ ಜಾಗವು ಸುಮಾರು 76 ವರ್ಷಗಳ ಬಳಿಕ ಇದೀಗ ಸರ್ಕಾರದ ಸ್ವಾಧೀನಕ್ಕೆ ಒದಗಿಬಂದಿದೆ.

ಮಡಿಕೇರಿ ಹೋಬಳಿ ಕಳಕೇರಿ ನಿಡುಗಣೆ ಗ್ರಾಮದ ಸರ್ವೆ ನಂಬರ್ 9/1ರ ಒಟ್ಟು ವಿಸ್ತೀರ್ಣ ಸರ್ವೆ ನಕಾಶೆಯಂತೆ 36.71 ಎಕರೆ ಪ್ರದೇಶವಿದೆ. ಈ ಪೈಕಿ 9.70 ಎಕರೆ ಜಮೀನಿನಲ್ಲಿ ಕೆ.ಬಿ. ಉತ್ತಪ್ಪ ಎಂಬವರು 1.3.1974ರ ಮುಂಚಿತವಾಗಿಯೇ ಕಾಫಿ ಸಾಗುವಳಿ ಮತ್ತು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಹಾಗಾಗಿ ಆ ಜಾಗವು ಅವರಿಗೆ ಬಿಟ್ಟುಕೊಡಲ್ಪಟ್ಟಿದೆ. ಉಳಿದ ವಿಸ್ತೀರ್ಣ 27.08 ಎಕರೆ ಆಸ್ತಿಯನ್ನು ಕಾನೂನಾತ್ಮಕವಾಗಿ ಓಂಕಾರೇಶ್ವರ ದೇಗುಲಕ್ಕೆ ಬಿಟ್ಟು ಕೊಡಲು ಸಾಧ್ಯವಿಲ್ಲವಾದುದರಿಂದ ರಾಜ್ಯ ಸರ್ಕಾರದ ಹೆಸರಿಗೆ ಖಾತೆ ವರ್ಗಾಯಿಸಿ ನಿಹಿತಗೊಳಿಸಲು ಆದೇಶಿಸಲಾಗಿದೆ. ತಾ. 16ರಂದು ಭೂ ನ್ಯಾಯ ಮಂಡಳಿಯ ಸಭೆಯಲ್ಲಿ ಮಂಡಳಿ ಅಧ್ಯಕ್ಷರು ಹಾಗೂ ಜಿಲ್ಲಾ ಉಪವಿಭಾಗಾಧಿಕಾರಿ ಡಾ. ಯತೀಶ್ ಉಲ್ಲಾಳ್ ಅವರು ಈ ಆದೇಶ ಹೊರಡಿಸಿದ್ದಾರೆ. ಸಭೆಯಲ್ಲಿ ಭೂ ನ್ಯಾಯ ಮಂಡಳಿ ಸದಸ್ಯರುಗಳಾದ ಪೆರಾಜೆಯ ನಾಗೇಶ್ ಕುಂದಲ್ಪಾಡಿ ಹಾಗೂ ಸಂಪಾಜೆಯ ರಮಾದೇವಿ ಇವರುಗಳು ಉಪಸ್ಥಿತರಿದ್ದರು.

ಈ ಸಂಬಂಧ ಕಳಕೇರಿ ನಿಡುಗಣೆ ಗ್ರಾಮದ ಕೆ.ಬಿ. ಉತ್ತಪ್ಪ ಅವರು ವಾದಿಯಾಗಿ ಭೂ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಪ್ರತಿವಾದಿಗಳಾಗಿ ಕಳಕೇರಿ ನಿಡುಗಣೆ ಗ್ರಾಮದ ಎ.ಜಿ. ರಾಮಚಂದ್ರರಾವ್ ಮತ್ತು ಮಡಿಕೇರಿ ಓಂಕಾರೇಶ್ವರ ದೇಗುಲದ ಕಾರ್ಯನಿರ್ವಹಣಾಧಿಕಾರಿಯವರನ್ನು ಪರಿಗಣಿಸಲಾಗಿತ್ತು.

ದಿ. ದೇವಮ್ಮ ಅವರು ಬರೆದಿದ್ದ ವಿಲ್‍ನಲ್ಲಿ 30 ಎಕರೆ ಜಾಗವನ್ನು ಓಂಕಾರೇಶ್ವರ ದೇವಸ್ಥಾನಕ್ಕೆ ನೀಡಿರುವುದಾಗಿ ಘೋಷಿಸಿದ್ದರು.