ವೀರಾಜಪೇಟೆ, ಡಿ. 22: ಕೊಡಗು ರಮ್ಯ ಪರಿಸರದ, ಪ್ರಕೃತಿ ಸೊಬಗಿನ ನಾಡು, ಇದು ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ. ಇದನ್ನೆ ಕುಂಚದಲ್ಲಿ ಅರಳಿಸಿದರೆ ಉತ್ತಮ ಕಲಾ ಚಿತ್ರ ಮೂಡಿ ಬರುತ್ತದೆ. ಆದ್ದರಿಂದ ಕಲಾವಿದರಿಗೆ ಒತ್ತಾಸೆ ನೀಡುವಂತಹ ತಾಣಗಳನ್ನು ಆರಿಸಿ ಚಿತ್ರಕಲಾ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ವೀರಾಜಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಮೊಗರಗಲ್ಲಿಯಲ್ಲಿ ಬುಧವಾರ ಸಾಧಿಕ್ ಅರ್ಟ್ ಗ್ಯಾಲರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಲಾ ಉತ್ಸವ 2022 ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಜ್ಯೋತಿ ಅವರು ಕಲೆ, ಸಾಹಿತ್ಯಕ್ಕೆ ಕೊಡಗು ಮರುಭೂಮಿಯಂತೆ ಎನ್ನುತ್ತಾರೆ, ವಿದ್ಯಾವಂತರಿದ್ದರು ಕಲೆ, ಸಾಹಿತ್ಯ ಕಾರ್ಯಕ್ರಮಗಳಿಗೆ ಬರುವುದಿಲ್ಲ ಹಾಗೂ ಪ್ರೋತ್ಸಾಹ ನೀಡುವುದಿಲ್ಲ. ಆದ್ದರಿಂದ ಪ್ರೋತ್ಸಾಹ ನೀಡಿ ಕಲಾವಿದರಿಗೆ ವೇದಿಕೆ ಒದಗಿಸಬೇಕು. ನಮ್ಮಲ್ಲಿ ಬಿ.ಆರ್ ಸತೀಶ್, ಸಾದಿಕ್‍ರಂತಹ ಹೆಸರಾಂತ ಕಲಾವಿದರು ಅನೇಕರಿದ್ದಾರೆ. ಅವರಿಗೆ ನಾವು ಸದಾ ಜೊತೆಯಾಗಿ ನಿಂತು ಸಹಕಾರ ನೀಡಬೇಕು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಜೊತೆಗೆ ಪ್ರತಿಯೊಂದು ಕೆಲಸವನ್ನು ಮಾಡಲು ಸಿದ್ಧರಿರಬೇಕು ಎಂದು ಹೇಳಿದರು.

ಹಿರಿಯ ಚಿತ್ರ ಕಲಾವಿದ ಹಾಗೂ ಶಿಕ್ಷಕ ಬಿ.ಆರ್.ಸತೀಶ್ ಕಲಾವಿದರ ಇಂದಿನ ಸ್ಥಿತಿ ಗತಿಯ ಬಗ್ಗೆ ಮಾತನಾಡಿ, ಕೊಡಗು ಜಿಲ್ಲೆಯು ಕ್ರೀಡೆ, ಸಂಸ್ಕøತಿ, ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ ಅದರಂತೆ ಎಲೆ ಮರೆಯ ಕಾಯಿಯಂತೆ ಚಿತ್ರಕಲೆಯು ಒಂದು ಭಾಗವಾಗಿ ಇಂದು ಅನೇಕ ಹೆಸರುವಾಸಿ ಚಿತ್ರಕಲಾವಿದರನ್ನು ಪುಟ್ಟ ಜಿಲ್ಲೆಯು ಹುಟ್ಟುಹಾಕುತ್ತಿದೆ,. ವೀರಾಜಪೇಟೆಯ ನಗರದ ನಿವಾಸಿ ಹಾಗೂ ಹವ್ಯಾಸಿ ಚಿತ್ರಕಲಾವಿದ ಸಾದಿಕ್ ಹಂಸ ಅವರ ಅವಿರತ ಶ್ರಮದಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮತ್ತು ಸಾದಿಕ್ ಆರ್ಟ್ ಲಿಂಕ್ಸ್ ಸಂಯುಕ್ತ ಆಶ್ರಯದಲ್ಲಿ 10 ದಿನಗಳ ಕಲಾ ಉತ್ಸವ ನಡೆಯುತ್ತಿದ್ದು, ಶಿಬಿರದಲ್ಲಿ ಸಾರ್ವಜನಿಕರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದು. ಸಾದಿಕ್ ಕಲೆಗೆ ಒಂದು ವೇದಿಕೆ ಸೃಷ್ಟಿ ಮಾಡಿದ್ದಾರೆ ಎಂದರು.

ಚಿತ್ರಕಲೆ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ. ಜಿಲ್ಲೆಯ ವಿದ್ಯಾರ್ಥಿಗಳು ಚಿತ್ರಕಲೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಕಲೆಗೆ ಹೊಸ ಅಧ್ಯಾಯ ತೋರಿಸಿಕೊಟ್ಟಂತಾಗುತ್ತದೆ ಎಂದು ಹೇಳಿದರು. ನಟ, ಕಲಾವಿದ, ಕೊಡವ ಸಮಾಜದ ಮಾಜಿ ಅಧ್ಯಕ್ಷ ವಾಂಚೀರ ನಾಣಯ್ಯ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಲಾವಿದರಿಗೆ ಮುಖ್ಯವಾಗಿ ಏಕಾಗ್ರತೆ ಬೇಕು. ಜೊತೆಗೆ ಪ್ರೋತ್ಸಾಹ ಹಾಗೂ ಅವಕಾಶಗಳು ದೊರೆಯುವಂತಾಗಬೇಕು, ಕಲೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಪುರಸಭೆ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಮಾತನಾಡಿ ನಮ್ಮ ಕಾವೇರಿ ತಪೋ ಭೂಮಿಯಲ್ಲಿ ಅನೇಕ ಮಹಾನ್ ಕಲಾವಿದರಿದ್ದಾರೆ. ಆದರೆ ಅವರಿಗೆ ವೇದಿಕೆಯ ಆಗತ್ಯವಿದೆ, ಆ ಮೂಲಕ ಅವರನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ಕಲಾವಿದನಿಗೆ ಪ್ರತಿಯೊಂದು ವಸ್ತು ಕೂಡ ವಿಭಿನ್ನವಾಗಿ ಕಾಣಿಸುತ್ತದೆ. ಅವರು ಅದನ್ನು ನೋಡುವ ದೃಷ್ಟಿಕೋನವೇ ಬೇರೆ. ಮುಂದಿನ ದಿನಗಳಲ್ಲಿ ವೀರಾಜಪೇಟೆಯ ಕಲಾವಿದ ಸಾದಿಕ್ ಅವರಿಗೆ ಪುರಸಭೆಯ ಮೂಲಕ ಸಹಾಯಧನ ನೀಡಲು ಪ್ರಸ್ತಾವನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪುರಸಭೆ ಸದಸ್ಯರಾದ ಮಹಮ್ಮದ್ ರಾಫಿ, ಎಸ್.ಎಚ್. ಮತೀನ್, ಅಮ್ಮುಣಿಚಂಡ ಪ್ರವೀಣ್ ಮಾತನಾಡಿ ಶಿಬಿರಕ್ಕೆ ಶುಭ ಹಾರೈಸಿದರು. ಶಿಬಿರ ಆಯೋಜಕ ಚಿತ್ರ ಕಲಾವಿದ ಸಾಧಿಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಮಾಲ್ದಾರೆಯ ಬಾವ ಕಾರ್ಯಕ್ರಮ ನಿರ್ವಹಿಸಿದರು. ಕಲಾವಿದರುಗಳ ಕಲಾ ಚಿತ್ರಗಳನ್ನು ಇದೇ ಸಂದರ್ಭ ಪ್ರದರ್ಶಿಸಲಾಯಿತು. ವೇದಿಕೆಯಲ್ಲಿದ್ದ ಅತಿಥಿಗಳು ಕಲಾ ಉತ್ಸವ ಶಿಬಿರಕ್ಕೆ ಚಾಲನೆ ನೀಡಿದರು. ಮೊಗರಗಲ್ಲಿಯ ಸಾದಿಕ್ ಆರ್ಟ್ ಲಿಂಕ್ಸ್ ಕಲಾಭೂಮಿಯಲ್ಲಿ ಡಿ.31 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.