ಮಡಿಕೇರಿ, ಡಿ. ೨೧: ಮಡಿಕೇರಿಯಿಂದ ವೀರಾಜಪೇಟೆ ಮಾರ್ಗದಲ್ಲಿ ೬೬/೧೧ ಕೆ.ವಿ.ಸಾಮರ್ಥ್ಯದ ವಿದ್ಯುತ್ ಲಿಂಕ್ ಲೈನ್ ಮಾರ್ಗ ಆರಂಭವಾಗಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದು ಕೊಡಗು ಮತ್ತು ಚಾಮರಾಜನಗರ ವೃತ್ತದ ಅಧೀಕ್ಷಕ ಇಂಜಿನಿಯರ್ ಸೋಮರಾಜ್ ತಿಳಿಸಿದ್ದಾರೆ.
ಮಡಿಕೇರಿಗೆ ಕುಶಾಲನಗರ ಮಾರ್ಗದಿಂದ ವಿದ್ಯುತ್ ಪೂರೈಕೆಯಾಗುತ್ತಿದೆ. ಈ ಮಾರ್ಗದಲ್ಲಿ ವಿದ್ಯುತ್ ಅಡಚಣೆ ಉಂಟಾದಲ್ಲಿ ವೀರಾಜಪೇಟೆ ಮಾರ್ಗದಿಂದ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ. ಆ ನಿಟ್ಟಿನಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಅಧೀಕ್ಷಕ ಇಂಜಿನಿಯರ್ ಸೋಮರಾಜ್ ತಿಳಿಸಿದ್ದಾರೆ.
ನಗರದ ಸೆಸ್ಕ್ ಕಚೇರಿ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು. ಶ್ರೀಮಂಗಲದಲ್ಲಿ ನಿರ್ಮಾಣವಾಗುತ್ತಿರುವ ೬೬/೧೧ ಕೆ.ವಿ. ವಿದ್ಯುತ್ ಉಪ ಕೇಂದ್ರ ಕಾಮಗಾರಿ ಶೇ. ೯೦ ರಷ್ಟು ಪೂರ್ಣಗೊಂಡಿದೆ. ಹಾಗೆಯೇ ಸೋಮವಾರಪೇಟೆ ತಾಲೂಕಿನ ಹಾನಗಲ್ ಶೆಟ್ಟಿಹಳ್ಳಿಯಲ್ಲಿ ಶೇ. ೬೦ ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು. ಹಾಗೆಯೇ ಮಾದಾಪುರ, ಹುದಿಕೇರಿ, ಮೂರ್ನಾಡು, ಸಿದ್ದಾಪುರದಲ್ಲಿ ೬೬/೧೧ ಕೆ.ವಿ. ಉಪ ಕೇಂದ್ರ ಆರಂಭಿಸುವ ಸಂಬAಧ ಟೆಂಡರ್ ಆಹ್ವಾನಿಸಬೇಕಿದೆ. ಭಾಗಮಂಡಲ-ಕೋಪಟ್ಟಿ, ಸಂಪಾಜೆ, ಕೊಡ್ಲಿಪೇಟೆ, ಮರಗೋಡು, ಬಾಳೆಲೆ, ಕಳತ್ಮಾಡು ಇಲ್ಲಿ ಸಹ ೬೬/೧೧ ಕೆ.ವಿ. ವಿದ್ಯುತ್ ಉಪಕೇಂದ್ರ ಆರಂಭಿಸಲು ಮಂಜೂರಾತಿ ದೊರೆತಿದೆ. ಈ ಎಲ್ಲಾ ವಿದ್ಯುತ್ ಉಪ ಕೇಂದ್ರಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಜಾಗ ಒದಗಿಸಿದೆ ಎಂದು ಸೋಮರಾಜ್ ತಿಳಿಸಿದ್ದಾರೆ. ಸೆಸ್ಕ್ ಇಇ ಅನಿತಾ ಬಾಯಿ, ಎಇಇ ವಿನಯ್ ಕುಮಾರ್ ಇತರರು ಇದ್ದರು.