ವೀರಾಜಪೇಟೆ, ಡಿ. ೨೧: ಎಲ್ಲಾ ಸಂಘಟನೆಗಳಲ್ಲಿ ಆಂತರಿಕ ಸಮಸ್ಯೆಗಳು ಇರುವುದು ಸಹಜ. ಆದರೆ ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಗೆಲುವು ಒಂದೇ ಗುರಿಯೆಂದು ಪರಿಶ್ರಮಪಡಬೇಕು ಎಂದು ಕರ್ನಾಟಕ ರಾಜ್ಯ ಕೆ.ಪಿ.ಸಿ.ಸಿ. ಕಾನೂನು ಘಟಕದ ರಾಜ್ಯ ಅಧ್ಯಕ್ಷ, ಹೈಕೋರ್ಟ್ ವಕೀಲ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ವೀರಾಜಪೇಟೆ ವತಿಯಿಂದ ನಗರದ ಹೊರವಲಯದ ಬಿಟ್ಟಂಗಾಲ ಹೆಗ್ಗಡೆ ಸಮಾಜ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಬಿ.ಎಲ್.ಎ.ಗಳ ಅಧಿಕಾರ ಪರಿಮಿತಿಗಳು, ಬ್ಲಾಕ್ ಮಟ್ಟದ ವಿವಿಧ ವಲಯಗಳ ಪದಾಧಿಕಾರಿಗಳ ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎ.ಎಸ್. ಪೊನ್ನಣ್ಣ ಚುನಾವಣೆಯ ಹೊಸ್ತಿಲಲ್ಲಿ ನಾವುಗಳಿದ್ದೇವೆ. ಪಕ್ಷದ ವರಿಷ್ಠರು ಮತ್ತು ಪಕ್ಷವು ಚುನಾವಣೆಯ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರೂ ಪಕ್ಷದ ಸಂಘಟನೆಯತ್ತ ಮತ್ತು ಅಭ್ಯರ್ಥಿಗಳ ಗೆಲುವಿನ ಪರ ನಮ್ಮ ಚಿತ್ತವಿರಬೇಕು. ಕಾರ್ಯಕರ್ತರು, ಪ್ರಮುಖರು, ಮುಖಂಡರು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷದ ಗೆಲುವಿಗಾಗಿ ತಳಮಟ್ಟದಿಂದ ಸಂಘಟಿತ ವಾಗಿ ಕಾರ್ಯನಿರ್ವಹಿಸಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಜಾತ್ಯತೀತ ನಿಲುವು ಹೊಂದಿರುವ ಸರ್ವ ಧರ್ಮಗಳು ಒಂದೇ ಎನ್ನುವ ಮಾನೋಭಾವದ ಪಕ್ಷ ಕಾಂಗ್ರೆಸ್ ಪಕ್ಷ. ಮುಂದಿನ ದಿನಗಳಲ್ಲಿ ಪಕ್ಷದ ಗೆಲುವಿಗಾಗಿ ಸರ್ವ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಿದಲ್ಲಿ ಪಕ್ಷವು ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
ರಾಜ್ಯ ಸೇವಾದಳದ ಸದಸ್ಯರಾಗಿ ಆಯ್ಕೆಯಾಗಿರುವ ಚಿಲ್ಲವಂಡ ಕಾವೇರಪ್ಪ ಅವರನ್ನು ಸನ್ಮಾನಿಸಲಾಯಿತು. ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಖಜಾಂಚಿ ಯಾಗಿ ಆಯ್ಕೆಗೊಂಡ ಅಯೂಬ್ ಅವರಿಗೆ ಆಯ್ಕೆ ಪತ್ರ ನೀಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ರಾಜ್ಯ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗೋಪಾಲ್ ಕೃಷ್ಣ, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ವೆಂಕಟೇಶ್, ರಾಜ್ಯ ಸೇವಾದಳದ ಸದಸ್ಯ ಚಿಲ್ಲವಂಡ ಕಾವೇರಪ್ಪ, ಪದವಿ ಕ್ಷೇತ್ರದ ಪ್ರಮುಖ ನರೇಂದ್ರ ಕಾಮತ್ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ವೀರಾಜಪೇಟೆ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅವರು, ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಚುನಾವಣೆಗೆ ಮೊದಲು ಆದ್ಯತೆ ನೀಡಬೇಕು. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸರ್ವ ಕಾರ್ಯಕರ್ತರು, ವಿವಿಧ ಘಟಕಗಳ ಮುಂಚೂಣಿಯ ನಾಯಕರು ಶ್ರಮಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಧ್ಯಕ್ಷ ಹೆಚ್.ಎಸ್. ಮಹಾದೇವ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೊಳುಮಂಡ ರಫೀಕ್, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ತೋರೆರ ಪೊನ್ನಕ್ಕಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಫಾರೋಖ್ ಹಾಜರಿದ್ದರು.
ಬ್ಲಾಕ್ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜಾನ್ಸನ್ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಪರಿಶಿಷ್ಟ ವರ್ಗ ಘಟಕದ ಜಿಲ್ಲಾಧ್ಯಕ್ಷ ವಿ.ಕೆ. ಸತೀಶ್ ಕುಮಾರ್ ವಂದಿಸಿದರು.
ವೀರಾಜಪೇಟೆ ಬ್ಲಾಕ್ನ ೧೮ ಗ್ರಾಮ ಪಂಚಾಯಿತಿಗಳ ವಲಯ ಅಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳು ಜಿಲ್ಲಾಮಟ್ಟ ಮತ್ತು ರಾಜ್ಯಮಟ್ಟದ ಪಧಾಧಿಕಾರಿಗಳು, ಪಕ್ಷದ ಹಿರಿಯ ಕಾರ್ಯಕರ್ತರು, ವೀರಾಜಪೇಟೆ ಪುರಸಭೆಯ ಚುನಾಯಿತ ಸದಸ್ಯರು, ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.