ಕಣಿವೆ, ಡಿ. ೨೧: ಶಿಕ್ಷಕರು ಶಾಲಾ ಕಾಲೇಜಿಗೆ ಬರುವಾಗ ನವ ನಾವೀನ್ಯದ ಉಡುಗೆ ತೊಟ್ಟು ಶಾಲೆಗಳಿಗೆ ಬಂದಲ್ಲಿ ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹ ಹಾಗೂ ಉಲ್ಲಾಸ ತುಂಬುತ್ತದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಭಿಪ್ರಾಯಪಟ್ಟರು.
ಜಿಲ್ಲೆಯ ಗಡಿ ಪ್ರದೇಶವಾದ ಹೆಬ್ಬಾಲೆಯ ಸಂಯುಕ್ತ ಪದವಿ ಕಾಲೇಜಿಗೆ ಭೇಟಿ ನೀಡಿದ ಅವರು ಶಾಲಾ ಕಾಲೇಜು ಮಕ್ಕಳು ಹಾಗೂ ಬೋಧಕ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಶಿಕ್ಷಕರು ಬಹಳಷ್ಟು ವಿಚಾರಗಳಲ್ಲಿ ಮಾದರಿಯಾಗಬಲ್ಲರು. ಆದ್ದರಿಂದ ಶಾಲೆಗೆ ಬರುವಾಗ ಶಿಕ್ಷಕರು ಅಂದ ಚೆಂದದ ಉಡುಗೆ ತೊಟ್ಟು ಉತ್ಸವಕ್ಕೆ ಬರುವಂತೆ ಶಾಲೆಗೆ ಬರುವ ಮೂಲಕ ಶಾಲಾ ಕೇಂದ್ರಗಳನ್ನು ಮಹೋತ್ಸವದ ಆಲಯಗಳಾಗಿ ಮಾರ್ಪಡಿಸಬೇಕು. ಹಾಗಿದ್ದಲ್ಲಿ ಮಕ್ಕಳಲ್ಲಿ ಕಲಿಕಾ ಪ್ರವೃತ್ತಿ ಹೆಚ್ಚುತ್ತದೆ ಎಂದು ಡಾ.ಸೋಮಶೇಖರ್ ಆಶಿಸಿದರು.
ಇಂದು ವಿದ್ಯಾರ್ಥಿಗಳಿಗೆ ಅತಿ ಮುಖ್ಯವಾಗಿ ಕಲಬೇಡ ಕೊಲಬೇಡ ಎಂಬ ಬಸವಣ್ಣನವರ ವಚನವೊಂದನ್ನು ಕಲಿಸುವ ಮೂಲಕ ಅದರಂತೆ ನಡೆಯುವುದನ್ನು ತಿಳಿಸಿದಲ್ಲಿ ಇಡೀ ಸಮಾಜ ಆನಂದಮಯವಾಗುತ್ತದೆ.
ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳು ಮಕ್ಕಳಲ್ಲಿ ಜಾಗೃತ ಶಕ್ತಿಯನ್ನು ನೀಡುತ್ತವೆ ಎಂದು ಅವರು ಹೇಳಿದರು.
ಈ ಸಂದರ್ಭ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಕಾಲೇಜು ವಿಭಾಗದ ಪ್ರಾಂಶುಪಾಲ ಎನ್.ಎನ್. ಧರ್ಮಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಸವರಾಜಶೆಟ್ಟಿ, ಕಸಾಪ ಜಿಲ್ಲಾ ನಿರ್ದೇಶಕರೂ ಆದ ಶಿಕ್ಷಕರಾದ ಮೆ.ನಾ. ವೆಂಕಟನಾಯಕ್, ಭೋಜೇಗೌಡ, ಕವಿತಾ ಪುಟ್ಟೇಗೌಡ, ವಿಜಯಕುಮಾರ್, ಶ್ವೇತಾ, ಯೋಗೇಶ್ ಇದ್ದರು.