ಮಡಿಕೇರಿ, ಡಿ. ೨೧: ಮಡಿಕೇರಿಯಲ್ಲಿ ರಾಜರ ಕೋಟೆ ಸಂರಕ್ಷಣೆ ಮತ್ತು ಪುನರ್‌ಸ್ಥಾಪನೆ ಸಂಬAಧ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಜ. ೯ ರೊಳಗಾಗಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ನ್ಯಾಯಾಲಯ ನೀಡಿದ್ದ ನಿರ್ದೇಶನದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಕೋಟೆಗೆ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು.

ಪುರಾತನವಾದ ರಾಜರಕೋಟೆ, ಅರಮನೆ, ಗದ್ದುಗೆ ಹಾಗೂ ರಾಜಾಸೀಟುಗಳನ್ನು ಸಂರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ವಿಫಲವಾಗಿರುವುದನ್ನು ಪ್ರಶ್ನಿಸಿ ನಿವೃತ್ತ ಐಎಎಸ್ ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಇತ್ತೀಚೆಗೆ ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲರಾದ ಎನ್. ರವೀಂದ್ರನಾಥ್ ಕಾಮತ್ ವಾದ ಮಂಡಿಸಿ ಇದುವರೆಗೆ ಕೋಟೆ, ಅರಮನೆಯ ಪುನರ್ ಸ್ಥಾಪನೆಗೆ ಖರ್ಚು ಮಾಡಿದ ಹಣದ ಬಗ್ಗೆ ಜಿಲ್ಲಾಡಳಿತ ಯಾವುದೇ ಮಾಹಿತಿಯನ್ನು ನೀಡಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಅರಮನೆಯ ಕೆಲಸ ಪರಿಪೂರ್ಣವಾಗಿಲ್ಲ. ಈ ರೀತಿ ಮಾಡುವುದರಿಂದ

(ಮೊದಲ ಪುಟದಿಂದ) ಮಳೆಗಾಲದಲ್ಲಿ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಈ ಕೂಡಲೇ ಜಿಲ್ಲಾಡಳಿತ ಕೈಗೊಂಡಿರುವ ಕ್ರಮದ ಬಗ್ಗೆ ನ್ಯಾಯಾಲಯಕ್ಕೆ ಸರಿಯಾದ ವಿವರಣೆ ನೀಡಬೇಕೆಂದು ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಜ. ೯ ರ ಒಳಗಾಗಿ ನ್ಯಾಯಾಲಯಕ್ಕೆ ಸವಿವರ ಮಾಹಿತಿ ನೀಡಬೇಕೆಂದು ನ್ಯಾಯಾಲಯ ಸೂಚನೆ ನೀಡಿತ್ತು. ಆ ಸೂಚನೆ ಅನ್ವಯ ಇಂದು ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರು ಪುರಾತತ್ವ ಇಲಾಖೆಯ ಅಧಿಕಾರಿಗಳು ಹಾಗೂ ಅರ್ಜಿದಾರರಾದ ವಿರೂಪಾಕ್ಷಯ್ಯ ಅವರುಗಳೊಂದಿಗೆ ಕೋಟೆಗೆ ಭೇಟಿ ನೀಡಿ ಕಾಮಗಾರಿಯ ಬಗ್ಗೆ ಸಂಬAಧಿಸಿದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಮಗಾರಿ ಬಗ್ಗೆ ಅರ್ಜಿದಾರರು ಕೆಲವೊಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಕಾಮಗಾರಿಯ ಟೆಂಡರ್‌ಗಳನ್ನು ಪರಿಶೀಲಿಸಿ, ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಂಬAಧಿಸಿದವ ರೊಂದಿಗೆ ಚರ್ಚಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಅರ್ಜಿದಾರರಾದ ವಿರೂಪಾಕ್ಷಯ್ಯ ಅವರು ಮಾತನಾಡಿ, ಟೆಂಡರ್ ಪ್ರಕಾರ ೧೦ ಕೋಟಿ ೯೦ ಲಕ್ಷ ಹಣವನ್ನು ರಾಜ್ಯ ಸರ್ಕಾರ ಪುರಾತತ್ವ ಇಲಾಖೆಗೆ ಜಮೆ ಮಾಡಿದ್ದರೂ ಕೂಡ ಕೋಟೆಯ ದುರಸ್ತಿ ಕಾಮಗಾರಿ ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದೆವು. ವಕೀಲ ರವೀಂದ್ರನಾಥ್ ಕಾಮತ್ ಅವರು ಈ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಬಳಿಕ ನ್ಯಾಯಾಲಯವು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸು ವಂತೆ ಸೂಚಿಸಿತ್ತು. ಕಳೆದ ಆಗಸ್ಟ್ನಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಸಾಮಗ್ರಿಗಳಿಗೆ ಟೆಂಡರ್ ಕರೆದಿಲ್ಲ ಎಂಬ ಕಾರಣವನ್ನು ಸಂಬAಧಿಸಿದ ವರು ನೀಡಿದ್ದು, ಇದೀಗ ಮರದ ಟೆಂಡರ್ ಇತ್ಯಾದಿ ಅಂತಿಮಗೊAಡಿ ರುವುದಾಗಿ ಮಾಹಿತಿ ನೀಡಿದ್ದಾರೆ. ಇಂದು ಸ್ಥಳ ಪರಿಶೀಲನೆ ನಡೆಯಲಿದೆ ಎಂದಾಗ ಕಳೆದ ವಾರದಿಂದ ಕೆಲಸಕ್ಕೆ ಜನರನ್ನು ಬಿಡಲಾಗಿದೆ ಎಂದು ತಿಳಿಸಿದರು. ಜನವರಿ ೯ ರಂದು ಪ್ರಕರಣದ ವಿಚಾರಣೆಯಿದ್ದು, ಜಿಲ್ಲಾಧಿಕಾರಿಗಳು ಸಲ್ಲಿಸುವ ವರದಿ ಚರ್ಚೆಗೆ ಬರಲಿದೆ. ಆ ಸಂದರ್ಭ ಕಾಮಗಾರಿ ಸ್ಥಗಿತ ಗೊಂಡಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಾ ಗುವುದು ಎಂದು ಹೇಳಿದರು.

ಪ್ರಾಚ್ಯ ವಸ್ತು ಇಲಾಖೆಯ ಅಧೀಕ್ಷಕರಾದ ಬಿಪಿನ್ ಚಂದ್ರನೇಗಿ ಮಾತನಾಡಿ ೨೦೨೩ರ ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು. ಈ ಸಂದರ್ಭ ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ್ ಮಹೇಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ನಾಗರಾಜು, ಪ್ರಾಚ್ಯವಸ್ತು ಇಲಾಖೆಯ ಕ್ಯೂರೇಟರ್ ರೇಖಾ ಮತ್ತಿತರರು ಹಾಜರಿದ್ದರು.