ಮಡಿಕೇರಿ, ಡಿ. ೨೧: ಕಾಫಿ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬಳಿಕ ಇದೀಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಕೃಷಿ ವಿಸ್ತರಣಾ ಘಟಕ ಹಾಗೂ ಭಾಗಮಂಡಲ, ವೀರಾಜಪೇಟೆ ಪ್ರಗತಿಪರ ಜೇನು ಕೃಷಿಕರ ಸಂಘದ ವತಿಯಿಂದ ನಗರದ ರಾಜಾಸೀಟ್ ಉದ್ಯಾನದಲ್ಲಿ ‘ಜೇನು ಉತ್ಸವ’ ಆಯೋಜಿಸಲಾಗಿದೆ.

ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಒಂದು ತಿಂಗಳುಗಳ ಕಾಲ ವಾರಾಂತ್ಯಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ರಾಜಾಸೀಟ್ ಉದ್ಯಾನದಲ್ಲಿ ಆಯೋಜಿಸಲು ಉದ್ದೇಶಿಸಲಾಗಿತ್ತು. ಅದರಂತೆ ಕಾಫಿ ಉತ್ಸವವನ್ನು ನಡೆಸಲಾಯಿತು. ಅದರ ಭಾಗವಾಗಿ ತಾ. ೨೪ ಹಾಗೂ ೨೫ ರಂದು ಜೇನು ಉತ್ಸವ ನಡೆಯಲಿದೆ. ಜೇನು ಉತ್ಪಾದಕರು ಹಾಗೂ ಸಂಸ್ಥೆಗಳು, ಜೇನು ಉತ್ಪಾದಿಸುವ ಸಲಕರಣೆಗಳ ಮಾರಾಟಗಾರರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಇದರಿಂದ ಕೊಡಗಿನ ಶುದ್ಧ ಜೇನಿಗೆ ಮಾರುಕಟ್ಟೆ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಮೊದಲು ಜೇನು ಕೃಷಿ ಒಂದು ಉಪಕಸುಬಾಗಿತ್ತು. ರೈತರ ಜೀವನೋಪಾಯದ ಮುಖ್ಯ ಆಧಾರವಾಗಿತ್ತು. ಬದಲಾದ ಕಾಲಘಟ್ಟದಲ್ಲಿ ವೈರಾಣುಗಳ ಕಾಟದಿಂದ ಜೇನು ಕೃಷಿಗೆ ವ್ಯತಿರಿಕ್ತ ಪರಿಣಾಮ ಎದುರಾಗಿ ಅವನತಿ ಹೊಂದಿತ್ತು. ಇದೀಗ ಕಳೆದ ಕೆಲವು ವರ್ಷಗಳಿಂದ ಜೇನು ಉತ್ಪಾದನೆ ಪುನಶ್ಚೇತನಗೊಳ್ಳುತ್ತಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯು ಇದೆ. ಜಿಲ್ಲೆಯಲ್ಲಿ ಒಟ್ಟು ೧೨,೮೯೭ ಜೇನು ಕೃಷಿಕರಿದ್ದು, ೬೦,೫೦೦ ಜೇನು ಪೆಟ್ಟಿಗೆಗಳಿವೆ. ವಾರ್ಷಿಕ ೪೯೯.೪೭ ಟನ್ ಜೇನು ಉತ್ಪಾದನೆಯಾಗುತ್ತಿದೆ ಎಂದು ವಿವರಿಸಿದರು.

ಜೇನು ಉತ್ಪಾದನೆಗೆ ಪೂರಕ ವಾಗುವ ಎಲ್ಲಾ ವಿಭಾಗಗಳನ್ನು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಉತ್ಸವ ನಡೆಯುತ್ತಿದೆ. ನುರಿತ ತಜ್ಞರಿಂದ ಜೇನು ಕೃಷಿಯ ಬಗ್ಗೆ ಮಾಹಿತಿಯೂ ಇಲ್ಲಿ ದೊರೆಯಲಿದೆ. ಜಿಲ್ಲೆ ಅಲ್ಲದೆ

(ಮೊದಲ ಪುಟದಿಂದ) ನೆರೆಜಿಲ್ಲೆಗಳಿಂದ ಉತ್ಪಾದಕರು ಬರಲಿದ್ದಾರೆ ಎಂದು ತಿಳಿಸಿದ ಅವರು, ಮುಂದಿನ ವಾರಾಂತ್ಯ ‘ವೈನ್ ಮೇಳ’ ನಡೆಯಲಿದೆ ಎಂದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚೆಕ್ಕೇರ ಪ್ರಮೋದ್ ಮಾತನಾಡಿ, ೨೦ ಸಂಸ್ಥೆ ಸದ್ಯಕ್ಕೆ ನೋಂದಾಣಿ ಮಾಡಿಸಿಕೊಂಡಿದೆ. ಇವರಿಗಾಗಿ ರಾಜಾಸೀಟ್ ಆವರಣದಲ್ಲಿ ಸ್ಟಾಲ್ ನಿರ್ಮಿಸಲಾಗಿದೆ. ಮಾಹಿತಿ ಕೇಂದ್ರ ಕೂಡ ಇರಲಿದೆ. ಉತ್ಪಾದಕರು ಇಲಾಖೆಯನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಂಡು ಮಾರಾಟ ಮತ್ತು ಪ್ರದರ್ಶನ ಮಾಡಬಹುದಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಜೇನು ಕೃಷಿ ಅಭಿವೃದ್ಧಿ ಅಧಿಕಾರಿ ಬಿ.ಡಿ. ವಸಂತ್ ಹಾಜರಿದ್ದರು.