ಶನಿವಾರಸಂತೆ, ಡಿ. ೨೧: ಸಮೀಪದ ಕೊಡ್ಲಿಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರೀಮಿಯರ್ ಲೀಗ್ ವತಿಯಿಂದ ನಡೆದ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಜೈಭೀಮ್ ತಂಡ ಪ್ರಥಮ ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ಹಾಗೂ ರೂ. ೩೦ ಸಾವಿರ ನಗದು ಗಳಿಸಿ ಸಂಭ್ರಮಿಸಿತು.
ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ೮ ಫ್ರಾಂಚೈಸಿಗಳ ಮುಖಾಂತರ ೮ ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯಲ್ಲಿ ಟೈಟಾನ್ ವಾರಿಯರ್ಸ್ ತಂಡ ದ್ವಿತೀಯ ಬಹುಮಾನವಾಗಿ ಟ್ರೋಫಿ ಹಾಗೂ ರೂ. ೨೦ ಸಾವಿರ ಗಳಿಸಿತು.
ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ದಾನಿ ಜೆಡಿಎಸ್ ಜಿಲ್ಲಾ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಕ್ರೀಡಾಕೂಟದಿಂದ ಪಟ್ಟಣದಲ್ಲಿ ಸಾಮರಸ್ಯ ಬೆಸೆದಿವೆ. ಯುವಕರಲ್ಲಿ ವ್ಯಕ್ತವಾಗುವ ಶಾಂತಿ, ಸೌಹಾರ್ದತೆ ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು.
ಶನಿವಾರಸಂತೆ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಮಾತನಾಡಿ, ದುಶ್ಚಟಗಳಿಗೆ ಬಲಿಯಾಗದೆ ಯುವಕರು ಕ್ರೀಡೆ ಮತ್ತಿತರ ಉತ್ತಮ ಹವ್ಯಾಶಸಗಳನ್ನು ಬೆಳೆಸಿಕೊಳ್ಳಬೇಕೆಂದರು.
ಪತ್ರಕರ್ತೆ ಶ.ಗ. ನಯನತಾರಾ ಮಾತನಾಡಿ, ಕ್ರೀಡೆ ಸಮಗ್ರ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯಿಂದ ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ ಎಂದರು.
ಅತಿಥಿಗಳು, ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಫೈನಲ್ ಪಂದ್ಯದ ಉತ್ತಮ ಬೌಲರ್, ಬ್ಯಾಟ್ಸ್ಮನ್, ಫೀಲ್ಡರ್ ಹಾಗೂ ಆಲ್ರೌಂಡರ್ ಉತ್ತಮ ಆಟಗಾರರನ್ನು ಗುರುತಿಸಿ ಬಹುಮಾನ ನೀಡಲಾಯಿತು.
ಅಧ್ಯಕ್ಷತೆಯನ್ನು ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಬಿ.ಕೆ. ದಿನೇಶ್ ಕುಮಾರ್ ವಹಿಸಿದ್ದರು. ಪ್ರಮುಖರಾದ ಎಂ.ಪಿ. ಚಂದ್ರಪ್ಪ, ಕೆ.ಸಿ. ದಿನೇಶ್, ಪತ್ರಕರ್ತ ಪಿ.ಸಿ. ಫ್ರೆಡ್ಡಿ, ಪ್ರೀಮಿಯರ್ ಲೀಗ್ ಪದಾಧಿಕಾರಿಗಳಾದ ಆಯೋಜಕ ಡಿ.ಎನ್. ವಸಂತ್, ಡಿ.ಬಿ. ವಿಜಯ್, ಕಾಂತ್ರಾಜ್, ಚಂದ್ರಪ್ಪ, ದಿನೇಶ್, ಡಿ.ಎಸ್. ವಸಂತ್, ಅರ್ಪಿತ್, ಹೇಮಂತ್, ಗಿರೀಶ್, ರೋಹನ್, ಸತೀಶ್, ವಿದ್ಯಾಸಾಗರ್ ಹಾಜರಿದ್ದರು.