*ಗೋಣಿಕೊಪ್ಪ, ಡಿ. ೨೧: ಬಡಾವಣೆಯ ನಿವಾಸಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುವ ಶ್ರಮಿಕರನ್ನು ಗೋಣಿಕೊಪ್ಪ ಕಾವೇರಿ ವೆಂಕಟಪ್ಪ ಬಡಾವಣೆಯ ಕಾವೇರಿ ಒಕ್ಕೂಟ ದಿಂದ ಸನ್ಮಾನಿಸಿ, ಗೌರವಿಸಲಾಯಿತು.

ಮಂಗಳವಾರ ನಡೆದ ಕಾವೇರಿ ಒಕ್ಕೂಟದ ವಾರ್ಷಿಕ ಮಹಾಸಭೆ ಯಲ್ಲಿ ಪ್ರತಿನಿತ್ಯ ಬಡಾವಣೆಯ ಶುಚಿತ್ವದ ಬಗ್ಗೆ ಗಮನಹರಿಸುವ ಪೌರ ಕಾರ್ಮಿಕರುಗಳಾದ ಸತ್ಯ, ನಂದಾ ಎಂಬ ಇಬ್ಬರು ಯುವಕರನ್ನು ಮತ್ತು ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಸ್ಪಂದಿಸುವ ಸೆಸ್ಕಾಂ ನೌಕರ ಹೆಚ್.ಆರ್. ಉಮೇಶ್, ಕೊರೊನಾ ಸಂದರ್ಭದಲ್ಲಿ ಈ ಭಾಗದ ಜನರ ಆರೋಗ್ಯವನ್ನು ಕಾಪಾಡಲು ನಿಷ್ಠೆಯ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆ ಶೋಭಾ ಮೋಹನ್, ಲತಾಶ್ರೀ ಶಶಿಕುಮಾರ್, ಅಂಗನವಾಡಿ ಕಾರ್ಯಕರ್ತೆ ಯಶಸ್ವಿನಿ ಮುರುಳಿ ಇವರುಗಳನ್ನು ಬಡಾವಣೆಯ ನಿವಾಸಿಗಳು ಸನ್ಮಾನಿಸಿದರು.

ಈ ಸಂದರ್ಭ ಥ್ರೋಬಾಲ್ ಕ್ರೀಡೆಯಲ್ಲಿ ಸಾಧನೆ ಮಾಡಿದ ನವೀನ್ ಪಿ.ಎಂ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ನೆಲ್ಲಮಕ್ಕಡ ಚಿಣ್ಣಪ್ಪ ಉತ್ತಪ್ಪ, ದೇವಿಕ ಕೆ.ಪಿ., ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಫಲಿತಾಂಶ ಪಡೆದ ಕಲ್ಯಾಟಂಡ ದೇವಯ್ಯ ನಂಜಪ್ಪ, ಎಂ.ಎಸ್. ಶಫಾನ ಇವರುಗಳನ್ನು ಸನ್ಮಾನಿಸಲಾಯಿತು. ನಂತರ ಬಡಾವಣೆಯ ಮಕ್ಕಳಿಗೆ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು. ವಾರ್ಷಿಕ ವರದಿಯನ್ನು ಬಡಾವಣೆಯ ಅಧ್ಯಕ್ಷ ಸುಳ್ಳಿಮಾಡ ನಾಚಪ್ಪ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ರಮೇಶ್ ಮಂಡಿಸಿದರು.

ಗೌರವಾಧ್ಯಕ್ಷ ಸಣ್ಣುವಂಡ ರಜನ್ ತಿಮ್ಮಯ್ಯ, ಉಪಾಧ್ಯಕ್ಷ ಪುರುಷೋತ್ತಮ, ಖಜಾಂಚಿ ಹೇಮಾವತಿ, ನಿರ್ದೇಶಕರುಗಳಾದ ಮದನ್ ಶೆಟ್ಟಿ, ನೂರೇರ ರಂಜಿ. ಪ್ರಶಾಂತ್, ಕಲ್ಯಾಟಂಡ ಶ್ಯಾಮ್, ಅಂತೋಣಿ ರಾಬಿನ್, ವಿವೇಕ್ ರಾಯ್ಕರ್, ಜಿತೇಂದ್ರ ವಿ.ವಿ., ಥೋಮಸ್, ಯಶೋಧ ರವಿ, ಜಾನಕಿ ಬೋಜಪ್ಪ, ರಾಣಿ ನಾರಾಯಣ, ವಿಶೇಷ ಗೌರವ ಸದಸ್ಯ ಅಜ್ಜಿಕುಟ್ಟೀರ ಸಜನ್ ಮತ್ತು ಏಳನೇ ವಾರ್ಡಿನ ಗ್ರಾ.ಪಂ. ಸದಸ್ಯೆ ಪುಷ್ಪಾ ಮನೋಜ್ ಉಪಸ್ಥಿತರಿದ್ದರು.

ಸಮಾರಂಭದ ಸಂಭ್ರಮದಲ್ಲಿದ್ದಾಗ ಮೂಡಗದ್ದೆ ವಿಕ್ರಂ ಅವರಿಗೆ ಸುಮಾರು ರೂ. ೫೦ ಸಾವಿರ ಮೌಲ್ಯದ ಚಿನ್ನದ ಸರ ಬಿದ್ದುಸಿಕ್ಕಿತು. ಅದನ್ನು ಸಂಬAಧಪಟ್ಟವರಿಗೆ ನೀಡುವ ಮೂಲಕ ಪ್ರಾಮಾಣಿಕ ನಡೆಯನ್ನು ತೋರಿಸಿಕೊಟ್ಟರು. ಇವರ ಈ ಕಾರ್ಯವನ್ನು ಶ್ಲಾಘಿಸಿ ಬಡಾವಣೆಯ ನಿವಾಸಿಗಳು ಗೌರವಿಸಿದರು.