ಸೋಮವಾರಪೇಟೆ, ಡಿ. ೨೦: ೨೦೨೩ರ ಫೆ. ೬ ರಂದು ಕನ್ನಡ ಸಾಹಿತ್ಯ ಪರಿಷತ್‌ನ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು.

ಕ.ಸಾ.ಪ. ಜಿಲ್ಲಾಧ್ಯಕ್ಷ ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ಥಳೀಯ ಪ್ರಮುಖರ ಸಲಹೆ ಸೂಚನೆ ಗಳನ್ನು ಪಡೆದು ಈ ಬಗ್ಗೆ ತೀರ್ಮಾನಿ ಸಲಾಯಿತು. ಸಮ್ಮೇಳನವನ್ನು ಯಶಸ್ವಿ ಗೊಳಿಸಲು ಸ್ವಾಗತ ಸಮಿತಿ, ಹಣಕಾಸು ಸಮಿತಿ ಸೇರಿದಂತೆ ಹತ್ತು ಉಪಸಮಿತಿಗಳನ್ನು ರಚಿಸಲಾಯಿತು. ಕನ್ನಡ ಬೆಳೆವಣಿಗೆಯಲ್ಲಿ ಗ್ರಾಮೀಣ ಜನರ ಕೊಡುಗೆ ಅಪಾರವಾಗಿದೆ. ಅತೀ ಹೆಚ್ಚು ಮಾತೃ ಭಾಷೆಯನ್ನು ಮಾತನಾಡುವುದೇ ಗ್ರಾಮೀಣ ಭಾಗದಲ್ಲಿ ಎಂದು ಜಿಲ್ಲಾಧ್ಯಕ್ಷ ಕೇಶವ ಕಾಮತ್ ಅಭಿಮಾನ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನ ಎಂಬುದು ಕನ್ನಡಿಗರ ಹಬ್ಬ. ಈ ಹಬ್ಬದಲ್ಲಿ ಕನ್ನಡ ಮನಸ್ಸುಗಳು ಭಾಗವಹಿಸಬೇಕು. ಕನ್ನಡ ಭಾಷೆಯ ಸಾಹಿತ್ಯ ಶ್ರೀಮಂತಿಕೆಯನ್ನು ಸಮ್ಮೇಳನಗಳ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ. ಎಲ್ಲರೂ ಕೈಜೋಡಿಸಿದರೆ ಕನ್ನಡಿಗರ ಹಬ್ಬ ಯಶಸ್ವಿಯಾಗಲಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್‌ನ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಗೌಡಳ್ಳಿಯಲ್ಲಿ ನಡೆಯುವ ತಾಲೂಕು ಸಮ್ಮೇಳನವನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ಇಲ್ಲಿನ ಕನ್ನಡಾಭಿಮಾನಿಗಳು ತೆಗೆದುಕೊಳ್ಳಬೇಕು. ಗೌಡಳ್ಳಿ ಹಾಗೂ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಜನರಲ್ಲಿ ಒಗ್ಗಟ್ಟಿದೆ. ಎಲ್ಲರೂ ಕೈಜೋಡಿಸುತ್ತಾರೆ ಎಂಬ ನಂಬಿಗೆಯಿAದ ಈ ಜಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಕನ್ನಡ ಹಬ್ಬಗಳು ರಾಜಕೀಯ ರಹಿತವಾಗಿ, ಜಾತಿ, ಧರ್ಮ, ಬಣ್ಣ ಯಾವುದೇ ಹಂಗಿಲ್ಲದೆ ನಡೆಯುತ್ತವೆ. ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ನಿರ್ವಹಿಸಬೇಕಿರುವುದರಿಂದ ೧೦ ಉಪ ಸಮಿತಿಗಳ ಪಾತ್ರ ಮುಖ್ಯವಾಗಿದೆ. ಅದರಲ್ಲೂ ಸ್ವಾಗತ, ಹಣಕಾಸು ಸಮಿತಿಯವರಿಗೆ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.

೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಡಿಕೇರಿ ಯಲ್ಲಿ ಯಶಸ್ವಿಗೊಳಿಸಿದ ಹಿರಿಮೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಇದೆ. ಇದುವರೆಗೆ ನಡೆದ ಎಲ್ಲಾ ಸಾಹಿತ್ಯ ಸಮ್ಮೇಳನಗಳು ಯಶಸ್ವಿ ಯಾಗಿವೆ. ೯ನೇ ತಾಲೂಕು ಸಮ್ಮೇಳನ ಕೂಡ ಯಶಸ್ವಿಯಾಗಿ ಕನ್ನಡ ಕಂಪು ಹರಿಯಲಿ ಎಂದು ಆಶಯ ವ್ಯಕ್ತಪಡಿಸಿದರು. ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಶನಿವಾರಸಂತೆ ಹೋಬಳಿ ಅಧ್ಯಕ್ಷ ಬಿ.ಬಿ. ನಾಗರಾಜ್, ಪ್ರಮುಖರಾದ ಹೆಚ್.ಆರ್. ಸುರೇಶ್, ಜಿ.ಎಂ. ಹೂವಯ್ಯ, ಅಜ್ಜಳ್ಳಿ ನವೀನ್, ದಿನೇಶ್, ಪ್ರಸ್ಸಿ, ಗೌಡಳ್ಳಿ ಮಹೇಶ್, ಮಮತ ಲೋಕೇಶ್, ಶಿವಯ್ಯ ಕೂಗೇಕೋಡಿ ಮತ್ತಿತರರು ಸಲಹೆಗಳನ್ನು ನೀಡಿದರು.

ತಾ. ೨೬ ರಂದು ಗೌಡಳ್ಳಿ ದೇವಾಲಯ ಸಭಾಂಗಣದಲ್ಲಿ ಉಪಸಮಿತಿಗಳ ಸಭೆ ಸೇರುವಂತೆ ತೀರ್ಮಾನವಾಯಿತು. ವೇದಿಕೆಯಲ್ಲಿ ತಾಲೂಕು ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್, ಪದಾಧಿಕಾರಿಗಳಾದ ಎ.ಪಿ. ವೀರರಾಜು, ಸಿ.ಎಸ್. ನಾಗರಾಜು, ಕೆ.ಪಿ. ದಿನೇಶ್, ಮೊಹಿದ್ದೀನ್, ದೇವಾಲಯ ಸಮಿತಿ ಗೌರವ ಅಧ್ಯಕ್ಷ ಹೆಚ್.ಆರ್. ಮುತ್ತಣ್ಣ, ಶುಂಠಿ ಮಂಗಳೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ನಂಜುAಡ ಮತ್ತಿತರರು ಇದ್ದರು.