ಮಡಿಕೇರಿ, ಡಿ. ೨೦: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಸಹಕಾರ ಸಂಸ್ಥೆಗಳಲ್ಲಿ ಸಂಪೂರ್ಣ ಡಿಜಿಟಲೀಕರಣದ ಮೂಲಕ ವ್ಯವಹಾರ’ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಸಮೃದ್ಧ ಭಾರತ ನಿರ್ಮಾಣದಲ್ಲಿ ಸಹಕಾರ ಚಳುವಳಿ ಮಾತ್ರವೇ ಪ್ರಧಾನ ಪಾತ್ರವನ್ನು ವಹಿಸಬಲ್ಲದು’ ಎಂಬ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆಯನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಇಂದು ಸಂಪೂರ್ಣ ಡಿಜಿಟಲೀ ಕರಣದ ಮೂಲಕ ವ್ಯವಹಾರ ನಡೆಸಲಾಗುತ್ತಿದೆ. ಭಾರತದಲ್ಲಿ ಸಹಕಾರ ಚಳುವಳಿಯು ಅಗಾಧವಾಗಿ ಬೆಳೆದಿದ್ದು, ಎಲ್ಲಾ ಯೋಜನೆಗಳನ್ನು ಸಹಕಾರ ಸಂಘಗಳ ಮೂಲಕ ಜಾರಿಗೆ ತರಲಾಗುತ್ತಿದೆ. ಅಲ್ಲದೆ ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯ ವನ್ನು ಸ್ಥಾಪಿಸಿ ರಾಷ್ಟçಮಟ್ಟದಿಂದ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಕೆಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಪ್ರಸ್ತುತ ಸಹಕಾರ ಕ್ಷೇತ್ರದಲ್ಲಿ ಯುವಜನರ ಪಾಲ್ಗೊಳ್ಳುವಿಕೆ ವಿರಳವಾಗಿದ್ದು, ಯುವಜನರು ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ. ಆ ಸಲುವಾಗಿ ಪ್ರಾಥಮಿಕ ಹಂತದಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.
ಚರ್ಚಾ ಸ್ಪರ್ಧೆಯ ತೀರ್ಪುಗಾರರಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಂ.ಈ. ಮೋಹನ್, ಯೂನಿಯನ್ ನಿರ್ದೇಶಕಿ ಪ್ರೇಮ ಸೋಮಯ್ಯ, ಕೆ.ಐ.ಸಿ.ಎಂ.ನ ಪ್ರಾಂಶುಪಾಲೆ ಡಾ. ಆರ್.ಎಸ್. ರೇಣುಕಾ ಹಾಗೂ ಪ್ರಬಂಧ ಪತ್ರಿಕೆಯ ಮೌಲ್ಯಮಾಪಕರಾಗಿ ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲೆ ಎಂ.ಎA. ಶ್ಯಾಮಲಾ ನಿರ್ವಹಿಸಿದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎನ್.ಎ. ರವಿ ಬಸಪ್ಪ, ಎನ್.ಎಂ. ಉಮೇಶ್ ಉತ್ತಪ್ಪ, ಪಿ.ಬಿ. ಯತೀಶ್ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ವಿಜೇತರ ವಿವರ
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಮೇಘ ಎಸ್. ಹಾಕತ್ತೂರು ಸರ್ಕಾರಿ ಪ್ರೌಢಶಾಲೆ, ದ್ವಿತೀಯ ಸಿ.ಎಂ. ದೃತಿ ದೇಚಮ್ಮ ಸಂತ ಜೋಸೆಫರ ಸಂಯುಕ್ತ ಪ್ರೌಢಶಾಲೆ- ಮಡಿಕೇರಿ, ತೃತೀಯ ನಿಯಾ ಕೆ.ಟಿ. ಕಾವೇರಿ ಪ್ರೌಢಶಾಲೆ,- ವೀರಾಜಪೇಟೆ.
ಸಮಾಧಾನಕರ ಬಹುಮಾನ -ಭೂಮಿಕಾ ಎನ್., ಸಂತ ಮೈಕಲರ ಪದವಿಪೂರ್ವ ಕಾಲೇಜು, ಮಡಿಕೇರಿ.
ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಶೃತಿ ಹೆಚ್.ಎನ್. ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜು, ದ್ವಿತೀಯ ಅರ್ಫ ಹೆಚ್.ಆರ್. ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜು, ತೃತೀಯ ಮದನ್ ಕೆ.ಕೆ.. ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜು, ಸಮಾಧಾನಕರ ಬಹುಮಾನ ಕಿರಣ್ ಕುಮಾರ್ ಬಿ.ಟಿ. ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜು.