ಸೋಮವಾರಪೇಟೆ, ಡಿ. ೧೯: ನಿರಖು ಠೇವಣಿ ಸಂಗ್ರಹ ಮತ್ತು ಸಾಲ ವಿತರಣೆಯಲ್ಲಿ ಕೊಡಗು ಸಹಕಾರ ಕೇಂದ್ರ ಬ್ಯಾಂಕ್ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದರು.

ಸಮೀಪದ ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯ ಸಹಕಾರಿಗಳ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು. ಸರ್ಕಾರಿ ಷೇರು ಹೂಡಿಕೆಯಲ್ಲಿ ಶೇ. ೨೩ ರಂತೆ ಮೊದಲ ಸ್ಥಾನ ಹಾಗು ಸಾವಿರ ಕೋಟಿ ರೂ.ಗಳ ಸಾಲ ನೀಡಿ ಮೊದಲ ಸ್ಥಾನದಲ್ಲಿದೆ. ಮುಂದಿನ ಸಾಲಿಗೆ ೧೩೦೦ ಕೋಟಿ ರೂ.ಗಳ ಠೇವಣಿ ಸಂಗ್ರಹ ಹಾಗೂ ೧೧೦೦ ಕೋಟಿ ರೂ.ಗಳ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದರು. ಜಿಲ್ಲೆಯಲ್ಲಿ ಕೇಂದ್ರ ಬ್ಯಾಂಕ್‌ನ ೨೧ ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ವ್ಯವಹಾರದಲ್ಲಿ ವಾಣಿಜ್ಯ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುತ್ತಿದ್ದೇವೆ. ಕಾಫಿ ಆಹಾರ ಧಾನ್ಯಗಳ ಪಟ್ಟಿಯಲ್ಲಿ ಸೇರಿದರೆ ಮಾತ್ರ, ಅನೇಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜನಪ್ರತಿನಿಧಿಗಳು ಸರ್ಕಾರದ ಗಮನಸೆಳೆದು ಕಾನೂನು ತಿದ್ದುಪಡಿ ಮಾಡಿಸಬೇಕು ಎಂದು ಮನವಿ ಮಾಡಿದರು. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್ ಮಾತನಾಡಿ, ರೈತರ ಶ್ರೇಯೋಭಿವೃದ್ಧಿಗಾಗಿ ಸಹಕಾರ ಸಂಘಗಳು ಸ್ಥಾಪನೆಯಾಗಿವೆ. ರೈತರಿಲ್ಲದೆ ಸಹಕಾರ ಸಂಘಗಳಿಲ್ಲ. ರೈತರ ಕತ್ತು ಹಿಸುಕುವ ಕಾನೂನನ್ನು ಸರ್ಕಾರಗಳು ತರಬಾರದು.

ಇಲ್ಲಿಯವರೆಗೆ ನಿಯಮ ಸರಳೀಕರಣದಿಂದ ರೈತರಿಗೆ ಸಾಲಸೌಲಭ್ಯ ಸಿಗುತ್ತಿತ್ತು. ಇನ್ನು ಆರ್‌ಬಿಐ ಅಡಿಯಲ್ಲಿ ಸಹಕಾರ ಸಂಘ ಗಳನ್ನು ಒಳಪಡಿಸಿದರೆ, ಸಾಲಗಾರ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಅವರನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಎನ್.ಎಸ್. ಪರಮೇಶ್, ಆಡಳಿತ ಮಂಡಳಿ ನಿರ್ದೇಶಕರಾದ ಎಸ್.ಬಿ. ಭರತ್ ಕುಮಾರ್, ವಿ.ಎನ್.£ Áಗರಾಜ್, ಜಿ.ಪಿ. ಸುನಿಲ್ ಕುಮಾರ್, ಪುಷ್ಪ ಸುರೇಶ್, ವಾಣಿ ಪ್ರಸಾದ್, ಡಿ.ಪಿ. ಸುಮಿತ್ರ, ಸಿ.ಎ. ಮಮತ, ಸಿ.ಇ. ವೆಂಕಟೇಶ್, ಕೆ.ಬಿ. ದಿನೇಶ್, ಜಿ.ಈ. ಸುರೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆ.ಕೆ. ಪೊನ್ನಪ್ಪ ಉಪಸ್ಥಿತರಿದ್ದರು.