ಸಿದ್ದಾಪುರ, ಡಿ. ೧೯: ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಬೇಕು. ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಕಲ್ಪಿಸಬೇಕು. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಮಸ್ಯೆಗಳನ್ನು ಬಿಚ್ಚಿಟ್ಟರು. ನೆಲ್ಲಿಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ೨೦೧೯ ರ ಮಹಾಮಳೆ ಪ್ರವಾಹಕ್ಕೆ ಸಿಲುಕಿ ನದಿ ತೀರದಲ್ಲಿ ೨೦೦ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿತ್ತು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಅರೆಕಾಡು ಬಳಿ ನಿವೇಶನ ಗುರುತಿಸಲಾಗಿತ್ತು. ಪುನರ್ವಸತಿಗೆ ಗುರುತಿಸಿದ ಜಾಗದಲ್ಲಿ ಕಿರುಸೇತುವೆ ಅಗತ್ಯವಿದ್ದು ಈ ಕಿರುಸೇತುವೆಯ ಕಾಮಗಾರಿಯು ಮಂದ ಗತಿಯಲ್ಲಿ ಸಾಗುತ್ತಿದೆ. ಕೂಡಲೇ ಸೇತುವೆ ನಿರ್ಮಾಣ ಮಾಡಿ ಆ ಜಾಗದಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು. ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ೧೦ ಸಾವಿರದಷ್ಟು ಜನಸಂಖ್ಯೆ ಇದ್ದು ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೇ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಂಚಾಯಿತಿ ನಿರ್ಲಕ್ಷö್ಯ ವಹಿಸುತ್ತಿದೆ. ಕೂಡಲೇ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು. ಗ್ರಾಮಸ್ಥರಾದ ಓ.ಎಂ. ಮುಸ್ತಫ ಮಾತನಾಡಿ, ನೆಲ್ಲಿಹುದಿಕೇರಿ ಆರೋಗ್ಯ ಘಟಕದಲ್ಲಿ ವೈದ್ಯರನ್ನು ನೇಮಕ ಮಾಡಬೇಕಾಗಿದೆ. ತುರ್ತು ಚಿಕಿತ್ಸೆಗೆ ದೂರದ ಊರಿಗೆ ತೆರಳುವಂತಾಗಿದೆ ಎಂದರು.

ಗ್ರಾ.ಪಂ. ಸದಸ್ಯ ಟಿ.ಆರ್. ಶಿವದಾಸ್ ಮಾತನಾಡಿ, ಪರಿಶಿಷ್ಟ ಜಾತಿ-ಪಂಗಡಗಳ ಜನಾಂಗದವರಿಗೆ ಸರ್ಕಾರದ ವತಿಯಿಂದ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಹಲವಾರು ಕುಟುಂಬಗಳ ಮತಾಂತರವಾಗಿ ಬೇರೆ ಧರ್ಮಕ್ಕೆ ಸೇರಿದ್ದಾರೆ. ಇವರುಗಳು ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಫಲಾನುಭವಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್ ಬಳಿ ಒತ್ತಾಯಿಸಿದರು. ನೆಲ್ಲಿಹುದಿಕೇರಿ ಗ್ರಾ.ಪಂ. ಕೆಲವು ಸದಸ್ಯರುಗಳು ಬೆಟ್ಟದಕಾಡು ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೂ. ೨೦ ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಿದ್ದು, ಅದು ಕಳಪೆ ಗುಣಮಟ್ಟದಿಂದ ಕೂಡಿದ್ದು, ತಾನು ಈ ಬಗ್ಗೆ ಲೋಕಾಯುಕ್ತಕ್ಕೆ ಕೂಡ ದೂರು ನೀಡುವುದಾಗಿ ಶಿವದಾಸ್ ಹೇಳಿದರು. ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಶ್ರೀ ವಿಷ್ಣುಮೂರ್ತಿ ಸತ್ಯನಾರಾಯಣ ದೇವಾಲಯದ ಸಮಿತಿಯ ಉಪಾಧ್ಯಕ್ಷ ಟಿ.ಜಿ. ಚಂದ್ರಶೇಖರ್ ಮಾತನಾಡಿ, ದೇವಾಲಯಕ್ಕೆ ಸೇರಿದ ಜಾಗದಲ್ಲಿ ಯಾವುದೇ ಶೌಚಾಲಯ ನಿರ್ಮಾಣ ಮಾಡದಂತೆ ಒತ್ತಾಯಿಸಿದರು. ಅಲ್ಲದೇ ಸಾರ್ವಜನಿಕ ಶೌಚಾಲಯಕ್ಕೆ ಗುರುತಿಸಿದ ಜಾಗವನ್ನು ಬಹಿರಂಗಪಡಿಸಬೇಕೆAದು ಆಗ್ರಹಿಸಿದರು. ನೆಲ್ಲಿಹುದಿಕೇರಿ ಎಂ.ಜಿ. ಕಾಲೋನಿಯಿಂದ ಸಾರ್ವಜನಿಕ ಚರಂಡಿಯ ಮೂಲಕ ಅಲ್ಲಿನ ನಿವಾಸಿಗಳು ಕೊಳಚೆ ನೀರನ್ನು ಹರಿಯ ಬಿಡುತ್ತಿದ್ದು, ಕೃಷಿ ಮಾಡುವ ಗದ್ದೆಗಳಿಗೆ ಹಾಗೂ ಕಾವೇರಿ ನದಿಗೆ ಸೇರುತ್ತಿದೆ ಎಂದು ಚಂದ್ರಶೇಖರ್ ತಿಳಿಸಿದರು. ಕೊಳಚೆ ನೀರು ಗದ್ದೆಗಳಲ್ಲಿ ನಿಂತು ದುರ್ನಾತ ಬೀರುತ್ತಿದ್ದು, ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಂ ಮಾತನಾಡಿ, ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಇರುವುದಾಗಿ ಗ್ರಾಮಸ್ಥರು ಆಗಿಂದಾಗ್ಗೆ ಇಲಾಖೆಗೆ ದೂರು ನೀಡುತ್ತಿದ್ದಾರೆ. ಕಾಡಾನೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದ ಮೂಲಕ ಕಾರ್ಯಪಡೆಯನ್ನು ರಚಿಸಲಾಗಿದ್ದು ಸಾರ್ವಜನಿಕರು ಕರೆ ಮಾಡಿದ್ದಲ್ಲಿ ಕಾರ್ಯಪಡೆಯ ಮುಖಾಂತರ ಸ್ಪಂದಿಸಲಾಗುವುದು. ಕಾಡಾನೆಗಳಿಂದ ಆಗುವ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದರು. ಬೆಳೆಹಾನಿ ಪರಿಹಾರಗಳನ್ನು ಹಂತ ಹಂತವಾಗಿ ನೀಡಲಾಗುತ್ತಿದೆ.

ಆನೆ ಹಾವಳಿಗೆ ಸೋಲಾರ್ ಬೇಲಿ ಅಳವಡಿಸಲಾಗುವುದು ಎಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಮಾತನಾಡಿ, ಸರ್ಕಾರದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ ಎಂದರು. ಗ್ರಾಮಸ್ಥರ ಪಹಣಿಪತ್ರ ಖಾತೆ ಬದಲಾವಣೆ, ಪಿಂಚಣಿ ಇನ್ನಿತರ ಕಂದಾಯ ಇಲಾಖೆಗೆ ಸಂಬAಧಿಸಿದ ಸಮಸ್ಯೆಗಳು ಬಗೆಹರಿದಿವೆ ಎಂದರು.

ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಉಪತಹಶೀಲ್ದಾರ್ ಮಧುಸೂದನ್, ಕಂದಾಯ ಪರಿವೀಕ್ಷಕ ಸಂತೋಷ್, ಆಹಾರ ನಿರೀಕ್ಷಕಿ ಸ್ವಾತಿ, ಸರ್ವೆ ಇಲಾಖೆಯ ಮಹೇಶ್, ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಹಕೀಂ, ಉಪಾಧ್ಯಕ್ಷೆ ಧಮಯಂತಿ, ಗ್ರಾಮ ಲೆಕ್ಕಿಗ ಸಚಿನ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

ನೆಲ್ಲಿಹುದಿಕೇರಿ ಪ್ರೌಢಶಾಲೆಯ ಶಿಕ್ಷಕ ಉದಯಕುಮಾರ್ ಪ್ರಾರ್ಥಿಸಿದರು. ಶಿಕ್ಷಕಿ ಹೆಲೆನ್ ಸಿಕ್ವೇರಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭ ಆರೋಗ್ಯ ಇಲಾಖೆಯಿಂದ ಕ್ಷಯ ರೋಗ ತಡೆಗಟ್ಟುವ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.