ಮಡಿಕೇರಿ,ಡಿ. ೧೯ : ಮಲೆನಾಡು ಪ್ರದೇಶ., ಅದರಲ್ಲೂ ಬಹುತೇಕ ಅರಣ್ಯ ಪ್ರದೇಶವನ್ನು ಒಳಗೊಂಡಿರುವ ಕೊಡಗು ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯಪ್ರಾಣಿಗಳ ಸಂಘರ್ಷ ದಿನನಿತ್ಯದ ಸಮಸ್ಯೆಯಾಗಿದೆ. ಅದರಲ್ಲೂ ಕಾಡಾನೆಗಳ ಹಾವಳಿಯಂತೂ ಮಿತಿ ಮೀರಿದೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ಸರಕಾರ ಕಣ್ತೆರೆದಿದ್ದು, ವಿಶೇಷ ಆನೆ ಕಾರ್ಯಪಡೆ ರಚನೆ ಮಾಡಿದೆ. ಕಾಡಾನೆ ಹಾವಳಿ ಸಂದರ್ಭ ದಿನದ ೨೪ ಗಂಟೆಗಳ ಕಾಲ ಈ ಕಾರ್ಯಪಡೆ ಸಾರ್ವಜನಿಕ ಸೇವೆಗಾಗಿ ಸದಾ ಸಿದ್ಧವಾಗಿರುತ್ತದೆ.
ಕೊಡಗು ಜಿಲ್ಲೆಗೆ ಸಂಬAಧಪಟ್ಟAತೆ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ವಿಶೇಷ ಆನೆ ಕಾರ್ಯಪಡೆ ರಚನೆ ಮಾಡಲಾಗಿದ್ದು, ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ, ತಿತಿಮತಿಯಲ್ಲಿ ಕಾರ್ಯಪಡೆ ಕಚೇರಿಗಳಿವೆ. ಶ್ರೀಮಂಗಲದಲ್ಲಿ ಒಂದು ಉಪ ಕೇಂದ್ರ ಕಾರ್ಯಾಚರಿಸುತ್ತಿದೆ.
ಅಧಿಕಾರಿಗಳ ತಂಡ
ಪ್ರತಿ ಕಾರ್ಯಪಡೆಯಲ್ಲಿ ಓರ್ವ ಉಪ ಅರಣ್ಯ ಸಂರಕ್ಷಣಾಧಿಕಾರಿ, ಓರ್ವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಓರ್ವ ವಲಯ ಅರಣ್ಯಾಧಿಕಾರಿ, ೮ ಮಂದಿ ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರು ಹಾಗೂ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಗಳು (ಆರ್ಆರ್ಟಿ) ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ತಂಡಕ್ಕೆ ಈಗಾಗಲೇ ನಾಲ್ಕು ಬೊಲೆರೋ ವಾಹನ, ಆರು ಆರ್ಆರ್ಟಿ ತಂಡದ ವಾಹನಗಳನ್ನು ಒದಗಿಸಲಾಗಿದ್ದು, ಇನ್ನೂ ಎರಡು ವಾಹನಗಳನ್ನು ಒದಗಿಸಲಾಗುವದೆಂದು ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಮಾಹಿತಿ ನೀಡಿದ್ದಾರೆ.
ಇಷ್ಟೇ ಅಲ್ಲದೆ, ಪ್ರತಿ ತಂಡಗಳಿಗೆ ವಾಹನಗಳ ಜತೆಗೆ ಅತ್ಯಾಧುನಿಕ ಬಂದೂಕುಗಳನ್ನು ಕೂಡ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ ಕಾಡಾನೆ ದಾಳಿ ಆದಾಗ ಈ ತಂಡ ಕೂಡಲೇ ಸ್ಥಳಕ್ಕೆ ಧಾವಿಸಿ ಜನರ ನೆರವಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ತಂಡಗಳಿಗೂ ವಯರ್ಲೆಸ್ ಸೆಟ್ ಗಳನ್ನು ನೀಡಲಾಗಿದ್ದು, ಎಲ್ಲ ತಂಡ ಗಳಿಗೆ ಆಗಿಂದಾಗ್ಗೆ ಮಾಹಿತಿಗಳನ್ನು ರವಾನಿಸಿಕೊಳ್ಳಲು ಇದು ಸಹಕಾರಿ ಯಾಗಲಿದೆ
(ಮೊದಲ ಪುಟದಿಂದ) ಎಂದು ಮೂರ್ತಿ ತಿಳಿಸಿದ್ದಾರೆ. ಕಾಡಾನೆ ದಾಳಿಯಾಗಿರುವ ಬಗ್ಗೆ ಕಾರ್ಯಪಡೆಗೆ ಮಾಹಿತಿ ಬಂದ ತಕ್ಷಣ ಸಿಬ್ಬಂದಿಗಳು ವಯರ್ಲೆಸ್ ಮೂಲಕ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.
ಈ ಕಾರ್ಯಪಡೆ ರಚನೆಯಿಂದಾಗಿ ಇನ್ನಾದರೂ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವದಲ್ಲದೆ, ಕ್ಷಿಪ್ರವಾಗಿ ಸಂಕಷ್ಟಕ್ಕೊಳಗಾದವರ ನೆರವಿಗೆ ಧಾವಿಸಲು ಪರಿಣಾಮಕಾರಿಯಾಗಲಿದೆ. ?ಸಂತೋಷ್