ಸೋಮವಾರಪೇಟೆ, ಡಿ. ೧೯: ನಗರೋತ್ಥಾನ ಯೋಜನೆಯ ೪ನೇ ಹಂತದಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ರೂ. ೨.೨೬ ಕೋಟಿ ಅನುದಾನ ಬಿಡುಗಡೆಯಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೂಮಿಪೂಜೆ ನೆರವೇರಿಸಿದರು.

ಈಗಾಗಲೇ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ರಸ್ತೆಗಳ ಕಾಂಕ್ರಿಟೀಕರಣ, ಡಾಂಬರೀಕರಣ, ಚರಂಡಿ, ಮೋರಿ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿದ್ದು, ಒಟ್ಟು ೨.೨೬ ಕೋಟಿ ಅನುದಾನ ಲಭ್ಯವಿದೆ. ತಕ್ಷಣ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಲಾಗುವುದು ಎಂದು ಶಾಸಕರು ತಿಳಿಸಿದರು. ಇಲ್ಲಿನ ಕಟ್ಟೆ ಬಸವೇಶ್ವರ ದೇವಾಲಯ ಬಳಿ ಅಳಿವಿನಂಚಿಗೆ ಜಾರಿರುವ ಕೆರೆಯ ಅಭಿವೃದ್ಧಿ ಯೊಂದಿಗೆ ನೂತನವಾಗಿ ಉದ್ಯಾನವನ ನಿರ್ಮಿಸಲಾಗುವುದು. ನಗರೋತ್ಥಾನದ ೭.೨೫ ಯೋಜನೆ ಯಡಿ ಇದಕ್ಕಾಗಿ ೧೮.೪೯ ಲಕ್ಷ ಅನುದಾನ ಮೀಸಲಿರಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಯೋಜನೆಗೆ ಚಾಲನೆ ನೀಡಿದ ರಂಜನ್ ಮಾಹಿತಿಯಿತ್ತರು.

ಪಟ್ಟಣದ ಎಲ್ಲಾ ೧೧ ವಾರ್ಡ್ಗಳಲ್ಲೂ ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ. ಎಲ್ಲಾ ವಾರ್ಡ್ಗಳಲ್ಲೂ ರಸ್ತೆ, ಚರಂಡಿ, ಮೋರಿ ನಿರ್ಮಾಣವಾಗಲಿದೆ. ಪಂಚಾಯಿತಿ ನಿಧಿಯಿಂದ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಉಪಾಧ್ಯಕ್ಷ ಸಂಜೀವ, ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರುಗಳಾದ ಮೃತ್ಯುಂಜಯ, ಬಿ.ಆರ್. ಮಹೇಶ್, ಬಿ.ಸಿ. ವೆಂಕಟೇಶ್, ಜಯಂತಿ ಶಿವಕುಮಾರ್, ಜೀವನ್, ಮೋಹಿನಿ, ಎಸ್. ಮಹೇಶ್, ಶರತ್‌ಚಂದ್ರ, ಅಭಿಯಂತರ ವೆಂಕಟೇಶ್ ನಾಯಕ್ ಸೇರಿದಂತೆ ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.