ಮಡಿಕೇರಿ, ಡಿ. ೧೯: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ರಾಜ್ಯ ಸರಕಾರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ತನಕ ಗ್ರಾ.ಪಂ. ಅಧ್ಯಕ್ಷರುಗಳಿಗೆ ರೂ. ೩ ಸಾವಿರ, ಉಪಾಧ್ಯಕ್ಷರಿಗೆ ರೂ. ೨ ಸಾವಿರ ಹಾಗೂ ಸದಸ್ಯರಿಗೆ ರೂ. ೧ ಸಾವಿರ ಗೌರವಧನವನ್ನು ಮಾಸಿಕವಾಗಿ ನೀಡಲಾಗುತ್ತಿತ್ತು.
ಪ್ರಸ್ತುತ ಇದನ್ನು ಪರಿಷ್ಕರಿಸಲಾಗಿದೆ. ಈ ಬಗ್ಗೆ ಸರಕಾರ ತಾ. ೧೮ ರಂದು ಹೊರಡಿಸಿರುವ ಹೊಸ ಆದೇಶದಂತೆ ಗ್ರಾ.ಪಂ. ಅಧ್ಯಕ್ಷರುಗಳಿಗೆ ಮಾಸಿಕ ರೂ. ೬ ಸಾವಿರ, ಉಪಾಧ್ಯಕ್ಷರಿಗೆ ರೂ. ೪ ಸಾವಿರ ಹಾಗೂ ಸದಸ್ಯರುಗಳಿಗೆ ರೂ. ೨ ಸಾವಿರ ಗೌರವಧನ ನಿಗದಿಪಡಿಸಲಾಗಿದೆ. ಸರಕಾರದ ಈ ಹೊಸ ಆದೇಶವನ್ನು ಕೊಡಗಿನ ಎಂಎಲ್ಸಿ ಸುಜಾ ಕುಶಾಲಪ್ಪ ಸ್ವಾಗತಿಸಿದ್ದಾರೆ.
ಈ ಹಿಂದೆ ತಾವು ಎಂಎಲ್ಸಿಯಾದ ಬಳಿಕ ನಡೆದ ಪ್ರಥಮ ಅಧಿವೇಶನದಲ್ಲಿ ಗ್ರಾ.ಪಂ. ಪ್ರತಿನಿಧಿಗಳು ಹಾಗೂ ಜನತೆ ಗ್ರಾಮ ವ್ಯಾಪ್ತಿಯಲ್ಲಿನ ಸಂಪರ್ಕ ಹಾಗೂ ಮಹತ್ವದ ಬಗ್ಗೆ ಪ್ರಸ್ತಾಪಿಸಿ ಈ ಪ್ರತಿನಿಧಿಗಳ ಗೌರವ ಧನ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದುದಾಗಿ ಅವರು ಸ್ಮರಿಸಿದ್ದಾರೆ.