ಸೋಮವಾರಪೇಟೆ, ಡಿ. ೧೯: ತಾಲೂಕು ಕಚೇರಿಯಲ್ಲಿ ಕೆಲಸ ಕಾರ್ಯಗಳಿಗೆ ಅರ್ಜಿ ಸಲ್ಲಿಸಿದರೆ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ಪ್ರತಿ ಟೇಬಲ್‌ನಿಂದ ಕಡತ ವಿಲೇಯಾಗಬೇಕಾದರೆ ಅರ್ಜಿದಾರರು ದಿನಗಟ್ಟಲೆ ಕಾಯಬೇಕು. ಕೆಲ ಟೇಬಲ್‌ಗಳಲ್ಲಿ ಹಣ ನೀಡದಿದ್ದರೆ ಅರ್ಜಿಗಳಿಗೆ ಮುಕ್ತಿ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಕಂದಾಯ ಇಲಾಖೆಯ ವಿರುದ್ಧ ಆರೋಪ ಮಾಡಿದರು.

ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವತಿಯಿಂದ ಗೆಜ್ಜೆಹಣಕೋಡು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ನರಗುಂದ್ ಅವರ ಎದುರೇ ಸಾರ್ವಜನಿಕರು ಕಂದಾಯ ಇಲಾಖೆಯ ವಿರುದ್ಧ ಆರೋಪಗಳ ಸುರಿಮಳೆಗೈದರು.

ಗ್ರಾಮಸ್ಥರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ನರಗುಂದ್ ಅವರು, ಲಂಚ ಪಡೆಯುವುದು ಹಾಗೂ ಕೊಡುವುದು ತಪ್ಪು. ಕಂದಾಯ ಇಲಾಖೆಯಲ್ಲಿ ನೌಕರರು ಲಂಚಕ್ಕಾಗಿ ಬೇಡಿಕೆ ಇಟ್ಟರೆ ಕೂಡಲೇ ತನ್ನ ಗಮನಕ್ಕೆ ತಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕೃಷಿಕರಿಗೆ ಭರವಸೆ ನೀಡಿದರು.

ಅನೇಕ ದುರಸ್ತಿ, ಪೋಡಿ, ಸರ್ವೇ ಕಡತಗಳು ವರ್ಷಾನುಗಟ್ಟಲೆ ಕಚೇರಿಯಲ್ಲೇ ಧೂಳು ತಿನ್ನುತ್ತಿವೆ. ತಹಶೀಲ್ದಾರ್ ಅವರು ಸಕಾಲದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಮಾಡಬೇಕು. ವಿಳಂಬ ಮಾಡಿರುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಫಿ ಬೆಳೆಗಾರರಾದ ಹೆಚ್.ಆರ್. ಸುರೇಶ್ ಆಗ್ರಹಿಸಿದರು.

ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡಬೇಕಾದ ಅವಶ್ಯಕತೆ ಇಲ್ಲ. ಅಂತಹ ಸಂದರ್ಭ ಬಂದರೆ ಕಚೇರಿಯಲ್ಲಿ ಸಂಪರ್ಕಿಸಿ, ಅವಧಿಯೊಳಗೆ ಕೆಲಸ ಮಾಡಿಸಿಕೊಡಲಾಗುವುದು. ಅರ್ಜಿಗೆ ಅವಶ್ಯಕವಿರುವ ಪೂರ್ಣ ದಾಖಲಾತಿಗಳ ವಿವರವನ್ನು ಒಂದೇ ಬಾರಿ ಹೇಳಬೇಕು. ಪದೇಪದೆ ಅರ್ಜಿದಾರರನ್ನು ಅಲೆಸಬಾರದು ಎಂದು ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ತಹಶೀಲ್ದಾರ್ ಸೂಚಿಸಿದರು.

ಕೊಗೇಕೋಡಿ ಗ್ರಾಮದಲ್ಲಿ ಒಂಟಿ ವೃದ್ಧೆಯ ಮನೆ ಬಿದ್ದುಹೋಗಿದೆ. ಇನ್ನೊಬ್ಬರ ಮನೆಯಲ್ಲಿ ವಾಸವಿದ್ದಾರೆ. ಪಂಚಾಯಿತಿ ವತಿಯಿಂದ ಮನೆ ನಿರ್ಮಾಣವಾಗುತ್ತಿದೆ. ಊಟಕ್ಕೆ ವ್ಯವಸ್ಥೆ ಮಾಡಿ ಎಂದು ಆದರ್ಶ್ ಕೇಳಿದರು. ಕೂಡಲೇ ಬಿಪಿಎಲ್ ಕಾರ್ಡ್ ಮಾಡಿ ಕೊಡುವಂತೆ ಆಹಾರ ಇಲಾಖೆಗೆ ತಹಶೀಲ್ದಾರ್ ಸೂಚಿಸಿದರು.

ವೃದ್ಧಾಪ್ಯ ವೇತನ ಪಡೆದುಕೊಳ್ಳಲು ವಯಸ್ಸಾದವರಿಂದ ಕೆಲವರು ಲಂಚ ಕೇಳುತ್ತಿದ್ದಾರೆ ಎಂದು ಸುರೇಶ್ ಬೇಸರ ವ್ಯಕ್ತಪಡಿಸಿದರು. ಅಂತಹ ಪ್ರಕರಣಗಳಿದ್ದರೆ ಇಲ್ಲಿಯೇ ಹೇಳಿ, ಲಂಚ ಪಡೆದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಹಶೀಲ್ದಾರ್ ಹೇಳಿದರು. ಇನ್ನು ಮುಂದೆ, ವೃದ್ಧಾಪ್ಯ ವೇತನ ಸೇರಿದಂತೆ ಹಲವು ಯೋಜನೆಗಳು ಮನೆಬಾಗಿಲಿಗೆ ಬರಲಿವೆ. ೬೫ ವರ್ಷವಾಗುತ್ತಿದ್ದಂತೆ ಗ್ರಾಮಲೆಕ್ಕಿಗರು ನಿಮ್ಮ ಮನೆಗೆ ಬಂದು ಅರ್ಜಿ ಪಡೆದು, ಸೌಲಭ್ಯ ಸಿಗುವಂತೆ ನೋಡಿಕೊಳ್ಳುತ್ತಾರೆ.

ಪ್ರತಿಯೊಬ್ಬರು ಆಧಾರ್ ಕಾರ್ಡ್ಗಳನ್ನು ಅಪ್‌ಡೇಟ್ ಮಾಡಿಸಿಕೊಳ್ಳಿ ಎಂದು ತಿಳಿಸಿದರು. ಗೆಜ್ಜೆಹಣಕೋಡು, ಕೂಗೇಕೋಡಿ, ದೊಡ್ಡಹಣಕೋಡು, ಹೊನವಳ್ಳಿ ಗ್ರಾಮಸ್ಥರು ಸಂಜೆ ೫ ಗಂಟೆಯವರೆಗೂ ಅರ್ಜಿ ಸಲ್ಲಿಸಿದರು. ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಂದು, ಉಪಾಧ್ಯಕ್ಷೆ ರಶೀದಾ, ಸದಸ್ಯರಾದ ಗೋಪಾಲಕೃಷ್ಣ, ಶಂಕರ್, ವೀಣಾ, ಭಾಗ್ಯ, ಉಪ ತಹಶೀಲ್ದಾರ್ ನಾಗರಾಜ್, ಅಬಕಾರಿ ಡಿವೈಎಸ್‌ಪಿ ಚೈತ್ರಾ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್, ಸಬ್‌ಇನ್ಸ್ಪೆಕ್ಟರ್ ರಮೇಶ್ ಕುಮಾರ್ ಮತ್ತಿತರರು ಇದ್ದರು.