ಗೋಣಿಕೊಪ್ಪಲು, ಡಿ. ೧೮: ನೂತನ ತಾಲೂಕು ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ೯೪ ಸಿ ಅಡಿಯಲ್ಲಿ ಹಕ್ಕು ಪತ್ರ ಹಾಗೂ ಸಾಗುವಳಿ ಚೀಟಿಯನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.

ಕೊಡಗು ಜಿಲ್ಲಾಡಳಿತ, ಪೊನ್ನಂಪೇಟೆ ತಾಲೂಕು ಆಡಳಿತ, ಪೊನ್ನಂಪೇಟೆ ಬಗರ್ ಹುಕುಂ ಸಾಗುವಳಿ ಸಕ್ರಮಿಕರಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಗುವಳಿ ಚೀಟಿ ವಿತರಣಾ ಹಾಗೂ ೯೪ ಸಿ ಅಡಿಯಲ್ಲಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಜರುಗಿತು.

ಪೊನ್ನಂಪೇಟೆ ತಾಲೂಕಿನಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮಿಕರಣ ಸಮಿತಿಯು ಅಧಿಕಾರ ವಹಿಸಿಕೊಂಡ ನಂತರ ಸಮಿತಿಯ ಅಧ್ಯಕ್ಷರಾದ ಕಾಡ್ಯಮಾಡ ಗಿರೀಶ್ ಗಣಪತಿಯವರು ಶಾಸಕರ ನಿರ್ದೇಶನ ಮೇರೆ, ಹಲವಾರು ಸಭೆಗಳನ್ನು ನಡೆಸಿ, ಅರ್ಜಿ ಸಲ್ಲಿಸಿದ್ದ ಅರ್ಜಿದಾರ ಅರ್ಹತೆ ಆಧಾರದ ಮೇರೆ ಪಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕು ಪತ್ರ ಹಾಗೂ ಸಾಗುವಳಿ ಚೀಟಿ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಸರ್ಕಾರದ ನಿಯಮಗಳನ್ನು ಅಳವಡಿಸಿಕೊಂಡು ಈ ಯೋಜನೆಯಡಿಯಲ್ಲಿ ಅರ್ಹತೆ ಹೊಂದಿದ್ದ ಫಲಾನುಭವಿಗಳಿಗೆ ಪ್ರಯೋಜನ ನೀಡಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು, ಮುಂದೆಯೂ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ವ್ಯಕ್ತಿಗಳಿಗೆ ನೀಡಲಾಗುತ್ತದೆ ಎಂದರು.

ಬಗರ್ ಹುಕುಂ ಸಮಿತಿಯ ಕಾಡ್ಯಮಾಡ ಗಿರೀಶ್ ಗಣಪತಿ ವಹಿಸಿ ಮಾತನಾಡಿ, ಕೆಲವು ತಾಂತ್ರಿಕ ಸಮಸ್ಯೆಯಿಂದ ಅರ್ಹತೆ ಪಡೆದ ನಾಗರಿಕರಿಗೆ ಯೋಜನೆಯ ಫಲ ದೊರೆಯುವುದು ಸ್ವಲ್ಪ ಮಟ್ಟಿಗೆ ತಡವಾಗಿದೆ.

ಸಮಿತಿಯ ಸದಸ್ಯರು ಹಲವಾರು ಸಭೆಗಳನ್ನು ನಡೆಸಿ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಹಕ್ಕು ಪತ್ರ ಹಾಗೂ ಸಾಗುವಳಿ ಚೀಟಿ ನೀಡಿರುವುದಾಗಿ ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಮಾತನಾಡಿ, ಪೊನ್ನಂಪೇಟೆ ತಾಲೂಕು ಅಸ್ತಿತ್ವಕ್ಕೆ ಬಂದ ನಂತರ ಶಾಸಕರ ವಿಶೇಷ ಆಸಕ್ತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಮುಂದಿನ ದಿನಗಳಲ್ಲಿ ಶಾಸಕರ ಆಶಯದಂತೆ ಉಳಿದ ಅರ್ಜಿಗಳನ್ನು ಪರಿಶೀಲನೆ ನಡೆಸಿ, ಆದಷ್ಟು ಬೇಗನೆ ಸಮಿತಿಯ ಮುಂದಿಟ್ಟು ಅರ್ಹತೆ ಇರುವ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಸಾಗುವಳಿ ಚೀಟಿ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಬಗರ್ ಹುಕುಂ ಸಮಿತಿಯ ಸದಸ್ಯರಾದ ತೀತಿಮಾಡ ಲಾಲ, ಯಮುನಾ ಚಂಗಪ್ಪ, ಚಲನ್ ಕುಮಾರ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.