ಪೊನ್ನಂಪೇಟೆ, ಡಿ. ೧೭: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ. ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವೀರಾಜಪೇಟೆ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟಕ್ಕೆ ಪೊನ್ನಂಪೇಟೆ ಗ್ರಾ.ಪಂ. ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಸದಾ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ದೈಹಿಕ ಹಾಗೂ ಮಾನಸಿಕ ಸಮತೋಲನ ವನ್ನು ಕಾಪಾಡಿಕೊಳ್ಳಲು ಕ್ರೀಡೆ ಸಹಾಯಕಾರಿಯಾಗಿದೆ ಎಂದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕÀ ವಿಸ್ಮಯಿ ಚಕ್ರವರ್ತಿ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್, ಉಪನ್ಯಾಸಕ ರಾಜೇಂದ್ರ ಪ್ರಸಾದ್, ತರಬೇತುದಾರರು, ದೈಹಿಕ ಶಿಕ್ಷಕರು, ತೀರ್ಪುಗಾರರು ಹಾಗೂ ಕ್ರೀಡಾಪಟುಗಳು ಇದ್ದರು.

ಫಲಿತಾಂಶ

ಪುರುಷರ ವಿಭಾಗದ ವಾಲಿಬಾಲ್‌ನಲ್ಲಿ ಮಾಲ್ದಾರೆ ತಂಡ ಪ್ರಥಮ, ಕದನೂರು ತಂಡ ದ್ವಿತೀಯ, ಕಬಡ್ಡಿಯಲ್ಲಿ ಬೇಟೋಳಿ ಪ್ರಥಮ, ಕದನೂರು ದ್ವಿತೀಯ, ಖೋ ಖೋನಲ್ಲಿ ಬೇಟೋಳಿ ಪ್ರಥಮ, ಅಮ್ಮತ್ತಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಿಳೆಯರ ವಿಭಾಗದ ಕಬಡ್ಡಿಯಲ್ಲಿ ಕಾಕೋಟು ಪರಂಬು ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.