ಭಾಗಮಂಡಲ, ಡಿ. ೧೮: ಚೇರಂಬಾಣೆ ಗೌಡ ಸಮಾಜದ ವತಿಯಿಂದ ಅರೆಭಾಷೆ ದಿನಾಚರಣೆ ಯನ್ನು ಆಚರಿಸಲಾಯಿತು. ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕಡ್ಯದ ಪಾರ್ವತಿ ಕೃಷ್ಣಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಪದ್ಧತಿ ಪರಂಪರೆಗಳು ಉಳಿಯಬೇಕಾದರೆ ಭಾಷೆಯ ಉಳಿವು ಅತ್ಯವಶ್ಯ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆನೆರ ಲಾಲು ಬಾಲಕೃಷ್ಣ ಅವರು ಮಾತನಾಡಿ ನಮ್ಮ ಜನಾಂಗದ ಪ್ರತಿಯೊಂದು ಕಷ್ಟ ಸುಖದ ಕಾರ್ಯಕ್ರಮಗಳಲ್ಲಿ ಮುಖ್ಯಸ್ಥರ ಪಾತ್ರ ಪ್ರಮುಖವಾಗಿರುತ್ತದೆ. ಅವರ ತಿಳುವಳಿಕೆಗೆ ಅನುಗುಣವಾಗಿ ಕಾರ್ಯಕ್ರಮ ನಡೆಸುತ್ತಾರೆ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ನಮ್ಮ ಸಂಸ್ಕೃತಿ ಶ್ರೀಮಂತ ಸಂಸ್ಕೃತಿಯಾಗಿದೆ. ಇಂತಹ ಶ್ರೀಮಂತ ಸಂಸ್ಕೃತಿಯ ಅಸ್ತಿತ್ವವನ್ನು ಉಳಿಸಿ ಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು. ಕೊಡಪಾಲು ಗಣಪತಿಯವರು ಮಾತನಾಡಿ ಚೇರಂಬಾಣೆ ಗೌಡ ಸಮಾಜ ಇತ್ತೀಚೆಗೆ ಅನಾವರಣ ಗೊಂಡಿದ್ದು ಇಂದು ಅರೆ ಭಾಷೆ ದಿನಾಚರಣೆಯನ್ನು ನಮ್ಮ ಸಮಾಜ ದಿಂದ ಮೊದಲ ಕಾರ್ಯಕ್ರಮವಾಗಿ ಆಚರಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು.

ಸಭಾ ಕಾರ್ಯಕ್ರಮದ ನಂತರ ಕಾಳೇರಮ್ಮನ ರಶಿ ಅಶೋಕ್, ಅಂಚೆಮನೆ ರಾಧಾ, ಕೊಡಪಾಲು ತೀರ್ಥ ಗಣಪತಿ, ಹೊಸಮನೆ ಶೋಭಾ ವೆಂಕಪ್ಪ, ಕೇಟೋಳಿ ನಳಿನಿ ಜಯ ಇವರು ಸೋಬಾನೆ ಪದ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್, ಕಾರ್ಯದರ್ಶಿ ಬೆಳ್ಯನ ಚಂದ್ರಪ್ರಕಾಶ್, ಬೈಮನ ಹರೀಶ್, ತೊತ್ಯನ ಚೇತನ್, ಕೊಡಗನ ತೀರ್ಥ ಕುಮಾರ್, ಬಾಡನ ಪವಿ ಸೇರಿದಂತೆ ಜನಾಂಗ ಬಾಂಧವರು ಪಾಲ್ಗೊಂಡಿದ್ದರು. ಸಮಾಜದ ಆಡಳಿತ ಮಂಡಳಿ ನಿರ್ದೇಶಕರಾದ ನೆಯ್ಯಣಿರ ಹೇಮಲತಾ ತಾರೇಂದ್ರ ಸ್ವಾಗತಿಸಿ ಕಡ್ಲೇರ ತುಳಸಿ ಮೋಹನ್ ಪ್ರಾರ್ಥಿಸಿದರು. ಕಾರ್ಯದರ್ಶಿ ಬೆಳ್ಯನ ಚಂದ್ರಪ್ರಕಾಶ್ ನಿರೂಪಿಸಿ ವಂದಸಿದರು.