ಸೋಮವಾರಪೇಟೆ, ಡಿ. ೧೮: ಕನ್ನಡ ಭಾಷೆಯ ಬೆಳವಣಿಗೆಯ ಜೊತೆಗೆ ಕನ್ನಡದ ಉಪಭಾಷೆಯಾದ ಅರೆಭಾಷೆ ಸಂಸ್ಕೃತಿ- ಭಾಷೆಯ ಬೆಳವಣಿಗೆಗೆ ಶ್ರಮಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಹೇಳಿದರು.
ತಾಲೂಕಿನ ಐಗೂರು ಅರೆಭಾಷೆ ಗೌಡ ಸಮಾಜದ ಆಶ್ರಯದಲ್ಲಿ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅರೆಭಾಷೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರೆಭಾಷೆ ಸಂಸ್ಕೃತಿ ಮತ್ತು ಆಚಾರ ವಿಚಾರಗಳು ಮುಂದಿನ ಪೀಳಿಗೆಗೂ ಪಸರಿಸಬೇಕಾದರೆ ಇಂದಿನ ಮಕ್ಕಳು ಸಂಸ್ಕೃತಿಯನ್ನು ಕಲಿತು ಇತರರಿಗೂ ಕಲಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಗೂರು ಅರೆಭಾಷೆ ಗೌಡ ಸಮಾಜದ ಅಧ್ಯಕ್ಷರಾದ ಕಡ್ಲೇರ ಹೊನ್ನಪ್ಪ ವಹಿಸಿದ್ದರು.
ವೇದಿಕೆಯಲ್ಲಿ ಅರೆಭಾಷೆ ಗೌಡ ಅಕಾಡೆಮಿ ಮಾಜಿ ಸದಸ್ಯರಾದ ಪ್ರೇಮಾ ರಾಘವಯ್ಯ, ಸೋಮವಾರಪೇಟೆ ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.