ಮಡಿಕೇರಿ, ಡಿ.೧೭ : ಕೊಡವ ಮಹಿಳೆಯರಿಗೆ ಭದ್ರತೆ ಹಿನ್ನೆಲೆಯಲ್ಲಿ ಬಂದೂಕು ತರಬೇತಿಯನ್ನು ಕಡ್ಡಾಯವಾಗಿ ಸರ್ಕಾರದ ವತಿಯಿಂದ ನೀಡಬೇಕು. ಕೋವಿ ಪರವಾನಗಿ ವಿನಾಯಿತಿ ಪತ್ರವನ್ನು ಕೊಡಗಿನ ಪ್ರತೀ ಐನ್‌ಮನೆ ವತಿಯಿಂದ ಕುಟುಂಬಸ್ಥರಿಗೆ ದೊರಕುವಂತೆ ಮಾಡಬೇಕು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯಡಿ ಕೋವಿ ಪರವಾನಗಿ ವಿನಾಯಿತಿ ಪತ್ರವನ್ನು ಹಕ್ಕುದಾರರಿಗೆ ವಿಳಂಬರಹಿತವಾಗಿ ನೀಡುವಂತಾಗ ಬೇಕು ಎಂಬುದೂ ಸೇರಿದಂತೆ ಹಲವು ಪ್ರಮುಖ ಹಕ್ಕೋತ್ತಾಯಗಳನ್ನು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಆಯೋಜಿತ ೧೩ ನೇ ವರ್ಷದ ತೋಕ್ ನಮ್ಮೆಯಲ್ಲಿ ಕೈಗೊಳ್ಳಲಾಯಿತು.

ದಕ್ಷಿಣ ಕೊಡಗಿನ ಕುರ್ಚಿ ಗ್ರಾಮದ ಅಜ್ಜಮಾಡ ಕುಟುಂಬದ ಐನ್‌ಮನೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸಿಎನ್‌ಸಿ ಅಧ್ಯಕ್ಷ ನಂದಿನೆರವAಡ ನಾಚಪ್ಪ ಅಧ್ಯಕ್ಷತೆಯಲ್ಲಿ ೧೩ ನೇ ವರ್ಷದ ಕೋವಿ ನಮ್ಮೆ ಸಂಭ್ರಮದಿAದ ಆಯೋಜಿತವಾಯಿತು. ಕೋವಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ಬಳಿಕ ಅಜ್ಜಮಾಡ ಐನ್‌ಮನೆ ವ್ಯಾಪ್ತಿಯಲ್ಲಿ ಕೋವಿ ಹಿಡಿದ ಕೊಡವರು, ಕೊಡವತಿಯರು, ಮೆರವಣಿಗೆ ನಡೆಸಿ ಕೋವಿಯ ಮಹತ್ವ ಸಾರಿದರು.

ಈ ಸಂದರ್ಭ ಜರುಗಿದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ನಾಚಪ್ಪ, ಕೊಡಗಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿದ್ದು, ಕೊಡವರ ಭದ್ರತೆ ದೃಷ್ಟಿಯಿಂದ ಕೊಡವತಿ ಯರಿಗೂ ಬಂದೂಕು ಚಲಾಯಿಸುವ ನಿಟ್ಟಿನಲ್ಲಿ ಸೂಕ್ತ ತರಬೇತಿಯನ್ನು ಸರ್ಕಾರದ ವತಿಯಿಂದಲೇ ನೀಡಬೇಕು. ಈ ಮೂಲಕ ದೇಶದ್ರೋಹಿ ಕೃತ್ಯದಲ್ಲಿ ತೊಡಗಿರುವವರು, ವನ್ಯಜೀವಿಗಳಿಂದ ಪ್ರಾಣ ಸಂರಕ್ಷಣೆ ನಿಟ್ಟಿನಲ್ಲಿ ಕೊಡವ ಮಹಿಳೆಯರಿಗೂ ಸೂಕ್ತ ತರಬೇತಿ ನೀಡಿದಂತಾಗುತ್ತದೆ ಎಂದು ಒತ್ತಾಯಿಸಿದರು. ಕೊಡವ ಯುವತಿಯರ ಮದುವೆ ಸಂದರ್ಭ ಕಾಣಿಕೆ ಪೆಟ್ಟಿಗೆಯಲ್ಲಿ ಕಡ್ಡಾಯವಾಗಿ ಕೋವಿ ಮತ್ತು

(ಮೊದಲ ಪುಟದಿಂದ) ಕೊಡವರ ಹಕ್ಕಾದ ಕೋವಿ ಪರವಾನಗಿ ವಿನಾಯಿತಿ ಪತ್ರವನ್ನು ಇರಿಸುವಂತಾಗಬೇಕು ಎಂದು ನಾಚಪ್ಪ ೧೩ನೇ ವರ್ಷದ ತೋಕ್ ನಮ್ಮೆಯ ಹಕ್ಕೋತ್ತಾಯ ಮಂಡಿಸಿ ಘೋಷಿಸಿದರು.

ಮೊಬೈಲ್ ಗುಂಗಿನಲ್ಲಿ ಮುಳುಗಿರುವ ಯುವಜನಾಂಗಕ್ಕೆ ಕೊಡವರ ಕೋವಿ ಹಕ್ಕು ಸೇರಿದಂತೆ ಕೊಡವರ ಹಕ್ಕುಗಳನ್ನು ತಿಳಿಸಿಹೇಳುವ ಅಗತ್ಯವಿದೆ. ಭವಿಷ್ಯದ ಪೀಳಿಗೆಗಾಗಿ ಕಳೆದುಕೊಂಡಿರುವ ಹಕ್ಕುಗಳನ್ನು ಕೊಡವರು ಈಗಿನಿಂದಲೇ ಮರಳಿ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ನಂದಿನೆರವAಡ ನಾಚಪ್ಪ ಅಭಿಪ್ರಾಯಿಸಿದರು.

ಕೊಡವ ನ್ಯಾಷನಲ್ ಕೌನ್ಸಿಲ್‌ನ ಹಲವಾರು ವರ್ಷಗಳ ನಿರಂತರವಾದ ಪ್ರಾಮಾಣಿಕ ಶಾಂತಿಯುತ ಹೋರಾಟದ ಫಲವಾಗಿಯೇ ಹೆಸರಾಂತ ವಕೀಲ ಡಾ.ಸುಬ್ರಮಣ್ಯಸ್ವಾಮಿ ಮುಂದಾಳತ್ವದಲ್ಲಿ ಕೊಡವ ಸ್ವಾಯತ್ತ ನಾಡಿನ ಬೇಡಿಕೆ ಸರ್ವೋಚ್ಚ ನ್ಯಾಯಾಲಯದ ಹೊಸ್ತಿಲನ್ನು ತಲುಪಿದೆ. ಸದ್ಯದಲ್ಲಿಯೇ ಈ ಬಗ್ಗೆ ನ್ಯಾಯಾಂಗ ಕೂಡ ಗಮನ ಹರಿಸಿ ಕೊಡವರ ಆದ್ಯತೆಯ ಬೇಡಿಕೆಗೆ ಸ್ಪಂದಿಸುವ ನಿರೀಕ್ಷೆಯಿದೆ ಎಂದು ನಾಚಪ್ಪ ಆಶಾಭಾವನೆ ವ್ಯಕ್ತಪಡಿಸಿದರು.

ಯಾವಾಗ ಕೊಡಗು ಕರ್ನಾಟಕ ರಾಜ್ಯದೊಂದಿಗೆ ತನ್ನ ಪ್ರತ್ಯೇಕ ಅಸ್ತಿತ್ವ ಕಳೆದುಕೊಂಡು ವಿಲೀನವಾಯಿತೋ ಆಗಲೇ ಕೊಡವರನ್ನು ನಿರ್ಲಕ್ಷಿಸುವ ಪರಿಪಾಟ ಸರ್ಕಾರಗಳಿಂದ ಪ್ರಾರಂಭವಾಯಿತು. ಕೊಡವ ಸಂಸ್ಕೃತಿಯನ್ನು ದ್ವೇಷಿಸುವ ರೀತಿಯಲ್ಲಿಯೇ ಅನೇಕರ ಮನೋಭಾವನೆಗಳು ಇತ್ತೀಚಿನ ದಿನಮಾನಗಳಲ್ಲಿ ಕಂಡುಬರುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಅಧಿಕಾರರೂಡರಿಂದಲೂ ಕೊಡವರ ಹಕ್ಕುಗಳನ್ನು ನಿರ್ಲಕ್ಷಿಸುವ ಮನಸ್ಥಿತಿ ಖಂಡನಾರ್ಹ ಎಂದು ನಾಚಪ್ಪ ಟೀಕಿಸಿದರು.ವೇದಿಕೆಯಲ್ಲಿ ಅಜ್ಜಮಾಡ ಕಟ್ಟಿ ಮಂದಯ್ಯ, ಅಜ್ಜಮಾಡ ವೇಣುಸುಬ್ಬಯ್ಯ, ಜಮ್ಮಡ ಮೋಹನ್, ಪುಲ್ಲೇರ ಸ್ವಾತಿ, ಪಟ್ಟಮಾಡ ಕುಶ, ಅಜ್ಜಮಾಡ ಕುಟುಂಬದ ನೂರಾರು ಸದಸ್ಯರು, ಸಿಎನ್‌ಸಿ ಪದಾಧಿಕಾರಿಗಳು ಹಾಜರಿದ್ದರು. ನಂದಿನೆರವAಡ ನಿಶ ಕೋವಿಯ ಮಹತ್ವ ಸಾರುವ ಪ್ರಾರ್ಥನಾ ಗೀತೆ ಹಾಡಿದರು. ಅಜ್ಜಿಕುಟ್ಟೀರ ಲೋಕೇಶ್ ಸ್ವಾಗತಿಸಿ, ಅರೆಯಡ ಗಿರೀಶ್ ವಂದಿಸಿದರು.

ಇದೇ ಸಂದರ್ಭ ಕುರ್ಚಿ ಗ್ರಾಮದ ದಕ್ಷಿಣ ಗಂಗೆ ತಂಡದಿAದ ಆಕರ್ಷಕ ನೃತ್ಯ ಪ್ರದರ್ಶನ ಜರುಗಿತು. ತೋಕ್ ನಮ್ಮೆಯ ಅಂಗವಾಗಿ ಆಯೋಜಿತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮಹಿಳೆಯರೂ ಮಕ್ಕಳೂ ಸೇರಿದಂತೆ ನೂರಾರು ಕೊಡವರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.

ಕೊಡವ ವಿಭೂಷಣ ಪ್ರಶಸ್ತಿ ಪ್ರದಾನ

ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೧೩ ನೇ ವರ್ಷದ ತೋಕ್ ನಮ್ಮೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡವ ವಿಭೂಷಣ ಪ್ರಶಸ್ತಿಯನ್ನು ನಂದಿನೆರವAಡ ನಾಚಪ್ಪ ಪ್ರದಾನ ಮಾಡಿದರು.

ಪ್ರೊ. ಮುಲ್ಲೇಂಗಡ ರೇವತಿ ಪೂವಯ್ಯ (ಸಂಶೋಧನೆ), ಅನಿಲ್ ಎಚ್.ಟಿ. (ಮಾಧ್ಯಮ ಮತ್ತು ಪ್ರವಾಸೋದ್ಯಮ), ಹಂಚೆಟ್ಟೀರ ಮನುಮುದ್ದಪ್ಪ (ಸಾಂಸ್ಕೃತಿಕ ಕ್ಷೇತ್ರ), ದಕ್ಷಿಣ ಗಂಗೆ ಸಾಂಸ್ಕೃತಿಕ ತಂಡ (ಸಾಂಸ್ಕೃತಿಕ), ಅಜ್ಜಮಾಡ ಚಂಗಪ್ಪ (ಸಮಾಜಸೇವೆ), ಅಜ್ಜಮಾಡ ಸಾವಿತ್ರಿ (ಕೊಡವ ಜಾನಪದ) ಇವರುಗಳಿಗೆ ಕೊಡವ ವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.