ಸೋಮವಾರಪೇಟೆ, ಡಿ. ೧೭: ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ಭತ್ತದ ಬೆಳೆ ಹಾನಿಯಾಗಿದ್ದು, ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ. ಬೆಳೆ ನಷ್ಟದ ಬಗ್ಗೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ತಾಲೂಕಿನ ಸಂಗಯ್ಯನಪುರ, ನೇರುಗಳಲೆ, ಬಾಣಾವರ, ಸಿದ್ಧಲಿಂಗಪುರ, ಹೆಬ್ಬಾಲೆ ಸೇರಿದಂತೆ ತಾಲೂಕಿನ ಇತರ ಸ್ಥಳಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ಮಾತನಾಡಿ, ಮೊನ್ನೆ ಒಂದೇ ದಿನದಲ್ಲಿ ಸುರಿದ ನಾಲ್ಕು ಇಂಚಿಗೂ ಅಧಿಕ ಮಳೆಯಿಂದ ತಾಲೂಕಿನ ಗರ್ವಾಲೆ, ಹರಗ, ಚಿಕ್ಕಾರ, ಹೆಬ್ಬಾಲೆ ಸೇರಿದಂತೆ ಹಲವೆಡೆಗಳಲ್ಲಿ ಭತ್ತದ ಗದ್ದೆಯಲ್ಲಿ ಕಟಾವು ಮಾಡಿ ಅಲ್ಲಿಯೇ ಬಿಟ್ಟಿರುವ ಫಸಲು ನೀರು ಸಂಗ್ರಹವಾಗಿದ್ದರಿAದ ಶೇ. ೯೦ರಷ್ಟು ಹಾನಿಯಾಗಿದೆ.
ಈ ಬಗ್ಗೆ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುತ್ತಿದೆ. ಹಾನಿಗೀಡಾಗಿರುವ ರೈತರು ತಮ್ಮ ಗದ್ದೆಯಲ್ಲಿ ಫಸಲು ಹಾನಿಯ ಫೋಟೋ, ಸ್ಥಳದ ಆರ್‌ಟಿಸಿ, ರೈತರ ಆಧಾರ್ ಕಾರ್ಡ್ ಪ್ರತಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಇಲಾಖೆಯ ಉಪ ನಿರ್ದೇಶಕ ಬಾಲರಾಜ್ ರಂಗರಾಜ್, ಕೃಷಿ ಅಧಿಕಾರಿ ನವ್ಯ ನಾಣಯ್ಯ ಅವರುಗಳು ಹಾನಿಪೀಡಿತ ಸ್ಥಳಗಳಿಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆಯುತ್ತಿದ್ದಾರೆ.