ಸಿದ್ದಾಪುರ, ಡಿ. ೧೬: ಪಾಲಿಬೆಟ್ಟದಲ್ಲಿ ಇತ್ತೀಚೆಗೆ ಯುವಕ ನೋರ್ವನನ್ನು ಕಾರು ಹತ್ತಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ತಲೆಮರಿಸಿ ಕೊಂಡಿದ್ದ ಆರೋಪಿ ನೌಷಾದ್ ಎಂಬಾತನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಾಲಿಬೆಟ್ಟ ನಿವಾಸಿ ಮೀನು ವ್ಯಾಪಾರಿ ಮೊಹಮದ್ ತಾಸಿರ್ ಎಂಬ ಯುವಕನು ರಾತ್ರಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪಾಲಿಬೆಟ್ಟ ಪಟ್ಟಣದಲ್ಲಿ ಅಲ್ಲಿನ ನಿವಾಸಿ ನೌಷಾದ್ ಎಂಬಾತನು ತನ್ನ ಕಾರಿನಲ್ಲಿ ಬಂದು ಡಿಕ್ಕಿಪಡಿಸಿ ಗಾಯಗೊಳಿಸಿದ್ದನು. ಗಂಭೀರ ಗಾಯ ಗೊಂಡಿದ್ದ ತಾಸಿರ್‌ಗೆ ಪಾಲಿಬೆಟ್ಟದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಯಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾಸಿರ್ ಸಾವನ್ನಪ್ಪಿದ್ದನು.

ಆರೋಪಿ ನೌಷಾದ್ ಕಾರು ಡಿಕ್ಕಿಪಡಿಸಿ ಪರಾರಿಯಾಗಿದ್ದನು. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ತಮಿಳು ನಾಡಿನ ವಿಮಾನ ನಿಲ್ದಾಣ ಬಳಿ ಆರೋಪಿಯನ್ನು

(ಮೊದಲ ಪುಟದಿಂದ) ಬಂಧಿಸಿದ್ದು, ಕೃತ್ಯಕ್ಕೆ ಹಳೇ ವೈಷಮ್ಯವೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣಾಧಿಕಾರಿ ಮೋಹನ್‌ರಾಜ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಠಾಣಾಧಿಕಾರಿ ತಮ್ಮಯ್ಯ ಮುಖ್ಯಪೇದೆ ರತನ್ ಅಪರಾಧ ಪತ್ತೆದಳದ ವಸಂತ್ ಕುಮಾರ್, ಸಿಡಿಆರ್ ವಿಭಾಗದ ರಾಜೇಶ್, ಪ್ರವೀಣ್, ಗಿರೀಶ್ ಇನ್ನಿತರರು ಭಾಗವಹಿಸಿದ್ದರು. - ವರದಿ : ವಾಸು