ಸೋಮವಾರಪೇಟೆ, ಡಿ. ೧೬: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರೈತರಿಗೆ ಬಿಪಿಎಲ್ ಕಾರ್ಡ್ ಇಲ್ಲದಿರುವುದರಿಂದ ತೋಟಗಾರಿಕೆ ಮತ್ತು ಕೃಷಿ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರಕುತ್ತಿಲ್ಲ. ಈ ಹಿನ್ನೆಲೆ ಸರ್ಕಾರದ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಳ್ಳಲು ೧.೫ ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಕೆಳಗಿನ ರೈತರನ್ನು ಬಿಪಿಎಲ್ ಕಾರ್ಡ್ ವ್ಯಾಪ್ತಿಗೆ ಒಳಪಡಿಸ ಬೇಕೆಂದು ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಕಿರಗಂದೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕಿರಗಂದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ ಎಸ್.ಕೆ. ರಘು ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ತೋಟಗಾರಿಕೆ, ಕೃಷಿ, ಅರಣ್ಯ, ಕಂದಾಯ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದಕ್ಕೂ ಬಿಪಿಎಲ್ ಕಾರ್ಡ್ ಅಥವಾ ೧.೫ ಎಕರೆಗಿಂತ ಕೆಳಗಿನ ಆಸ್ತಿ ಹೊಂದಿರುವ ರೈತರಿಗೆ ಸಣ್ಣಹಿಡುವಳಿದಾರರ ದೃಢೀಕರಣ ಪತ್ರ ಕೇಳುತ್ತಾರೆ.
ಆದರೆ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆಯವರು ನೀಡುತ್ತಿಲ್ಲ. ಹೀಗಾಗಿ ಎಲ್ಲಾ ಸರ್ಕಾರಿ ಸೌಲಭ್ಯಗಳು ಸಣ್ಣ ರೈತರಿಗೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ವಿನಾಯಿತಿ ಕೋರಿ ಜಿಲ್ಲಾಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಪ್ರಸ್ತಾವನೆ ಸಲ್ಲಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಕಿರಗಂದೂರು, ಗರ್ವಾಲೆ ಮತ್ತು ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅನ್ವಯವಾಗುವಂತೆ ಸುಮಾರು ೧೦ ಸಾವಿರಕ್ಕೂ ಅಧಿಕ ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯುವ ನೀರನ್ನು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸರ್ಕಾರದಿಂದ ಹಸಿರು ನಿಶಾನೆ ದೊರೆತೊಡನೆ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ವಿರೇಂದ್ರ ಸಭೆಯಲ್ಲಿ ಮಾಹಿತಿ ನೀಡಿದರು.
ಕಳೆದ ವರ್ಷ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಬೆಟ್ಟ ಗ್ರಾಮಕ್ಕೆ ರಸ್ತೆ ಕಾಮಗಾರಿಗೆ ಶಾಸಕರು ಭೂಮಿಪೂಜೆ ಮಾಡಿ ಹೋಗಿದ್ದಾರೆ. ಆದರೆ ಈವರೆಗೂ ಕಾಮಗಾರಿ ಆರಂಭವಾಗಿಲ್ಲ ಎಂದು ಗ್ರಾಮಸ್ಥರಾದ ಕೆ.ಈ. ಕುಟ್ಟಪ್ಪ ಮತ್ತು ಎ.ಪಿ. ತಿಮ್ಮಯ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ರಸ್ತೆ ಕಾಮಗಾರಿ ಆರಂಭಿಸಬೇಕೆAದು ಸಭೆಯಲ್ಲಿ ಆಗ್ರಹಿಸಿದರು. ಗ್ರಾಮಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ತಮ ಇಲಾಖೆಗೆ ಸಂಬAಧಿಸಿದ ಇಲಾಖೆಗಳ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಶುಭರಾಣಿ, ಸದಸ್ಯರುಗಳು, ಪಿಡಿಓ ರಜನಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.