ಮಡಿಕೇರಿ, ಡಿ. ೧೬: ವಿಶೇಷಚೇತನರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ೨೦೧೬ ರಲ್ಲಿ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಇಲ್ಲಿಯವರೆಗೆ ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಇರುವುದು ವಿಷಾದಕರವೆಂದು ನಗರದ ವೈದ್ಯರಾದ ಡಾ. ದೀಪ ವಿ. ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಓಂಕಾರ ಸದನದಲ್ಲಿ ವಿವಿಧ ಇಲಾಖೆಗಳ ವತಿಯಿಂದ ನಡೆದ ವಿಶ್ವ ವಿಶೇಷಚೇತನರ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿಶೇಷ ಚೇತನರನ್ನು ಹಾಡಿ ಹೊಗಳಲಾ ಗುತ್ತಿದೆಯೇ ಹೊರತು ಅಗತ್ಯ ಗೌರವ ಮತ್ತು ಸೌಲಭ್ಯಗಳನ್ನು ನೀಡುತ್ತಿಲ್ಲ ವೆಂದು ಆರೋಪಿಸಿದರು.

೨೦೧೬ ರ ಕಾಯ್ದೆಯ ಪ್ರಕಾರ ಎಲ್ಲಾ ಸಾರ್ವಜನಿಕ ಕಟ್ಟಡಗಳಲ್ಲಿ ವಿಶೇಷಚೇತನರ ಸಂಚಾರಕ್ಕೆ ಅನುಕೂಲವಾಗುವಂತೆ ಇಳಿಜಾರು ದಾರಿ ಮತ್ತು ಹಿಡಿದುಕೊಳ್ಳಲು ನೆರವಾಗುವ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಇದು ೨೦೨೨ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳ ಬೇಕೆನ್ನುವ ನಿಯಮವಿದೆ. ಆದರೆ ಆಸ್ಪತ್ರೆಗಳು, ಕಾಲೇಜುಗಳು, ವಿಶೇಷಚೇತನರ ಕಚೇರಿ, ಶಾಪಿಂಗ್ ಕಾಂಪ್ಲೆಕ್ಸ್, ಹೋಟೆಲ್‌ಗಳು ಸೇರಿದಂತೆ ಯಾವುದೇ ಸಾರ್ವಜನಿಕ ಕಟ್ಟಡಗಳು ಈ ನಿಯಮವನ್ನು ಸಂಪೂರ್ಣವಾಗಿ ಪಾಲಿಸುತ್ತಿಲ್ಲ. ಮಡಿಕೇರಿಯಲ್ಲಿರುವ ಜಿಲ್ಲಾ ವಿಶೇಷಚೇತನರ ಕಚೇರಿಯಲ್ಲೇ ವಿಶೇಷಚೇತರಿಗೆ ಅನುಕೂಲಕರ ಪರಿಸ್ಥಿತಿ ಇಲ್ಲ. ಇಲ್ಲಿನ ರ‍್ಯಾಂಪ್ ತುಂಬಾ ಕಡಿದಾಗಿದೆ, ಇಳಿಜಾರು ೧:೧೨ ರಷ್ಟು ಇರಬೇಕು. ಆದರೆ ಈ ವೈಜ್ಞಾನಿಕ ನಿಯಮವನ್ನು ಇಲ್ಲಿ ಪಾಲಿಸಿಲ್ಲ. ಬೇರೆಯವರ ಸಹಾಯವಿಲ್ಲದೆ ವಿಶೇಷಚೇತನರು ಸಂಚರಿಸಲು ಸಾಧ್ಯವಿಲ್ಲ ಎಂದು ಗಮನ ಸೆಳೆದ ಡಾ. ದೀಪ, ಕಚೇರಿಯ ಸ್ಥಳ ಬದಲಾವಣೆಯ ಅಗತ್ಯವಿದೆ ಎಂದು ತಿಳಿಸಿದರು.

ರಾಷ್ಟçಪತಿಗಳು ಹಾಗೂ ಮುಖ್ಯ ಮಂತ್ರಿಗಳು ಕೂಡ ವಿಶೇಷಚೇತನರನ್ನು ಗೌರವಿಸಲು ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿದ್ದಾರೆ ಮತ್ತು ಪ್ರೋತ್ಸಾಹಿಸಿದ್ದಾರೆ. ಆದರೆ ಇಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರು ಸನ್ಮಾನ ಮಾಡುವವರೆಗೆ ಕಾಯದೆ ತಮ್ಮ ಪಾಲಿನ ಭಾಷಣ ಮುಗಿಸಿ ತೆರಳಿದ್ದಾರೆ. ಇದು ಸನ್ಮಾನಿತರಿಗೆ ತುಂಬಾ ನೋವನ್ನುಂಟು ಮಾಡಿದೆ. ನಮ್ಮ ಅಹವಾಲುಗಳನ್ನು ಕೇಳಿಸಿಕೊಳ್ಳಲು ಕೂಡ ಯಾರೂ ಇಲ್ಲದ ಪರಿಸ್ಥಿತಿ ಇದೆ ಎಂದರು.

ಕಚೇರಿ ಮತ್ತಿತರ ಪ್ರದೇಶಗಳಲ್ಲಿ ವಿಶೇಷಚೇತನರಿಗೆ “ಹ್ಯಾಂಡಿಕ್ಯಾಪ್” ಎಂಬ ಪದ ಬಳಸುವುದನ್ನು ನಿಲ್ಲಿಸಬೇಕು ಎಂದು ಅವರು ಇದೇ ಸಂದರ್ಭ ಮನವಿ ಮಾಡಿದರು.

ಕರ್ನಾಟಕ ಜೀವ ವೈವಿಧÀ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್. ವೆಂಕಟೇಶ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಸಲಹಾ ಸಮಿತಿ ಸದಸ್ಯ ಅಜಯ್ ಸೂದ್, ವಕೀಲ ಮನೋಜ್ ಬೋಪಯ್ಯ, ಜಿಲ್ಲಾ ದಿವ್ಯಾಂಗ ಒಕ್ಕೂಟದ ಅಧ್ಯಕ್ಷರಾದ ಈಶ್ವರಿ, ವಿಶೇಷಚೇತನರ ವಿವಿಧೋದ್ದೇಶ ಸಹಕಾರ ಸಂಘದ ತಿರುಮಲೇಶ್ವರ, ಜಿಲ್ಲಾ ವಿಶೇಷಚೇತನ ಸಹಾಯವಾಣಿಯ ಮಾಹಿತಿ ಸಲಹೆಗಾರ ಎಚ್.ಎಸ್. ನವೀನ್ ಮತ್ತಿತರರು ಉಪಸ್ಥಿತರಿದ್ದರು.