ಶನಿವಾರಸಂತೆ, ಡಿ. ೧೭: ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಇಚ್ಚಿಸುವ ರೈತರು ಕೃಷಿ ಇಲಾಖೆಯಲ್ಲಿ ಸೂಕ್ತ ದಾಖಲಾತಿ ನೀಡಿ ಹೆಸರು ನೋಂದಾಯಿಸಿ ಕೊಳ್ಳಬೇಕು ಎಂದು ತಾಲೂಕು ಕೃಷಿ ಇಲಾಖೆ ಅಧಿಕಾರಿ ಅರುಣಾ ಹೇಳಿದರು.

ಸಮೀಪದ ಕೊಡ್ಲಿಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಲೀನಾ ಪರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪಿ.ಎಂ. ಕಿಸಾನ್ ಸಮ್ಮಾನ್‌ಗೆ ಸಹಾಯಧನಕ್ಕೆ ನೋಂದಾಯಿಸಲು ೨೦೧೯ ರ ನಂತರದ ಪಹಣಿಯಾಗಿದ್ದಲ್ಲಿ ಸಾಧ್ಯವಿಲ್ಲ. ಇ.ಕೆ.ವೈ.ಸಿ. ಮಾಡಿಸಿ ದವರಿಗೆ ಹಾಗೂ ಬ್ಯಾಂಕ್‌ಗಳಿಗೆ ಆದಾಯ ತೆರಿಗೆ ಪಾವತಿ ಕಡತ ನೀಡದವರಿಗೂ ಸಹಾಯಧನ ಬರುವುದಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿಹೊಂಡ, ಅಡಿಕೆ ಗುಂಡಿ, ಎರೆ ಹುಳ ತೊಟ್ಟಿ ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರಾಮಸ್ಥರು ಗ್ರಾಮದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಕೆಲ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಕೆಲ ಬಾರ್‌ಗಳಲ್ಲಿ ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಬಾರ್ ಮುಂಭಾಗದ ರಸ್ತೆಬದಿ ನಿಂತು ಕುಡಿಯುವುದರಿಂದ ಮಹಿಳೆಯರು ಮತ್ತು ಮಕ್ಕಳು ತಿರುಗಾಡಲು ತೊಂದರೆಯಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೨೪ ಗಂಟೆ ವೈದ್ಯರು ಲಭ್ಯವಿರುವುದಿಲ್ಲ. ರಾತ್ರಿ ವೇಳೆ ಗರ್ಭಿಣಿ ಮಹಿಳೆಯರಿಗೆ ಚಿಕಿತ್ಸೆ ಲಭ್ಯವಿಲ್ಲದೆ ತೊಂದರೆಯಾಗುತ್ತಿದೆ. ಸಂಬAಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಬಕಾರಿ ಇಲಾಖೆಯ ಸಹಾಯಕ ನಿರೀಕ್ಷಕಿ ಸುಮತಿ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಚೈತ್ರಾ, ಅರಣ್ಯ ಇಲಾಖಾಧಿಕಾರಿ ಗೋವಿಂದ್ ರಾಜ್, ಆರೋಗ್ಯಾಧಿಕಾರಿ ರಕ್ಷಿತ್, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಸಲೀಂ, ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ರವೀಶ್, ವಿದ್ಯುತ್ ಇಲಾಖೆ ಕಿರಿಯ ಇಂಜಿನಿಯರ್ ಅಪ್ಪೇಶ್, ಸಮಾಜ ಕಲ್ಯಾಣ ಇಲಾಖೆಯ ಧರ್ಮಮ್ಮ ತಮ್ಮ ಇಲಾಖೆಗಳಿಗೆ ಸಂಬAಧಿಸಿದ ಮಾಹಿತಿ ನೀಡಿದರು. ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ ಮೇದಪ್ಪ, ಸದಸ್ಯರಾದ ಹನೀಫ್, ಮೋಕ್ಷಿಕ್ ರಾಜ್, ದಿನೇಶ್ ಕುಮಾರ್, ಪಾವನಾ, ಪಿ.ಡಿ.ಓ. ಗಿರೀಶ್, ಸಿಬ್ಬಂದಿ ಉಪಸ್ಥಿತರಿದ್ದರು.