ವೀರಾಜಪೇಟೆ, ಡಿ. ೧೫: ವೀರಾಜಪೇಟೆ ಪುರಸಭಾ ವ್ಯಾಪ್ತಿಯ ಹದಗೆಟ್ಟ ರಸ್ತೆಗಳ ದುರಸ್ತಿ, ಕುಡಿಯುವ ನೀರಿನ ಸರಬರಾಜಿನಲ್ಲಿ ಉಂಟಾಗುತ್ತಿರುವ ವ್ಯತ್ಯಯ, ಪಟ್ಟಣ ನೈರ್ಮಲ್ಯದ ನಿರ್ಲಕ್ಷö್ಯ, ಸರಕಾರಿ ಭೂಮಿ ಕಬಳಿಕೆ ಮುಂತಾದ ವಿಷಯಗಳನ್ನು ಮುಂದಿರಿಸಿ ಸ್ಥಳೀಯ ನಾಗರಿಕ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇ ಗೌಡರ ಬಣ) ಕಾರ್ಯಕರ್ತರು ಪುರಸಭಾ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ನಾಗರಿಕ ಸಮಿತಿ ಸಂಚಾಲಕರಾದ ಡಾ||.ಐ.ಆರ್. ದುರ್ಗಾಪ್ರಸಾದ್, ಸಹ ಸಂಚಾಲಕ ಸೋಮ ಲೋಕನಾಥ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಕೆ.ಟಿ. ಬಷೀರ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಪುರಸಭಾ ವ್ಯಾಪ್ತಿಯ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಸಂಚಾರ ಯೋಗ್ಯವನ್ನಾಗಿಸಬೇಕು, ಕುಡಿಯುವ ನೀರಿನ ಕೇಂದ್ರ ಯೋಜನೆಯನ್ನು ಪಾರದರ್ಶಕವಾಗಿ ಕಾರ್ಯಗತಗೊಳಿಸಬೇಕು, ನೈರ್ಮಲ್ಯದ ದೃಷ್ಟಿಯಿಂದ ಕಸ ವಿಲೇವಾರಿ ವಾಹನಗಳನ್ನು ಇನ್ನಷ್ಟು ಕಾರ್ಯಕ್ಷಮಗೊಳಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಮನವಿ ಪತ್ರವನ್ನು ಸಲ್ಲಿಸಿದರು. ಬೇಡಿಕೆಗಳಿಗೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಇನ್ನಷ್ಟು ಹೋರಾಟಗಳನ್ನು ನಡೆಸುವುದಾಗಿಯೂ ತಿಳಿಸಿದರು.