ಇಂದು ಹಬ್ಬ ಆರಂಭ

ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿರುವ ಕೊಡಗಿನ ಪುರಾಣ ಪ್ರಸಿದ್ಧ ಮಕ್ಕಿ ಶ್ರೀ ಶಾಸ್ತ್ತಾವು ಸನ್ನಿಧಿಯಲ್ಲಿ ತಾ. ೧೬ ರಿಂದ (ಇಂದಿನಿAದ) ಮಣ್ಣಿನ ನಾಯಿಯ ಹರಕೆ ಒಪ್ಪಿಸುವ ಸಂಭ್ರಮದ ಹಬ್ಬ ಇದು. ತಾ. ೧೯ ರವರೆಗೆ ನಡೆಯಲಿದೆ.

ಸತ್ಯದ ಸನ್ನಿಧಿಯೆಂದು ಪ್ರಖ್ಯಾತಿ ಪಡೆದಿರುವ ಇಲ್ಲಿ ವರ್ಷಕ್ಕೆರಡು ಬಾರಿ ವಿಶಿಷ್ಟ ಹಬ್ಬ ನಡೆಯುತ್ತದೆ. ಇದೀಗ ಮೊದಲನೆ ಹಬ್ಬವಾಗಿದ್ದು, ಎರಡನೇ ಮುಖ್ಯ ಹಬ್ಬ ಮೇ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ. ಎರಡೂ ಹಬ್ಬಗಳು ಮಹತ್ವಗಳಿಂದ ಕೂಡಿವೆ. ಹರಕೆಯ ಮಣ್ಣಿನ ನಾಯಿ ಒಪ್ಪಿಸುವದು ಎತ್ತೇರಾಟ, ದೀಪಾರಾಧನೆ, ಅಜ್ಜಪ್ಪ ಮತ್ತು ವಿಷ್ಣುಮೂರ್ತಿ ಕೋಲಗಳು ಇಲ್ಲಿನ ಮುಖ್ಯ ಆಕರ್ಷಣೆ.

ಈಗ ನಡೆಯುವ ಹಬ್ಬದಲ್ಲಿ ಎತ್ತೇರಾಟದ ಬದಲಿಗೆ ಹರಕೆಯ ನಾಯಿ ಸಲ್ಲಿಸಲಾಗುತ್ತದೆ. ಇಲ್ಲಿ ಹರಕೆಯ ನಾಯಿ ತಯಾರಿಸುವ ಮತ್ತು ದೇವರಿಗೆ ಒಪ್ಪಿಸುವ ಕ್ರಮ ಅಪರೂಪದ್ದಾಗಿದೆ. ಈ ದೇವಾಲಯಕ್ಕೆ ಶ್ರದ್ಧಾಭಕ್ತಿಯಿಂದ ಮಣ್ಣಿನ ನಾಯಿ ತಯಾರಿಸಲೆಂದೇ ಕೆಲವು ಜನರಿದ್ದಾರೆ. ಹಬ್ಬಕ್ಕೆ ೧೫ ದಿನಗಳ ಮೊದಲು ನಿಗದಿತ ಸ್ಥಳದಲ್ಲಿ ಮಣ್ಣಿನ ನಾಯಿಯ ರಚನೆ ಕಾರ್ಯ ನಡೆಯುತ್ತದೆ. ಹಬ್ಬಕ್ಕೆ ಒಂದು ದಿವಸ ಮೊದಲು ತಯಾರಿಸಿದ ಮಣ್ಣಿನ ನಾಯಿಯನ್ನು ಸುಡುವ, ಹದಮಾಡುವ ಕ್ರಮವಿದೆ. ಹಬ್ಬಕ್ಕಿಂತ ಒಂದು ತಿಂಗಳ ಮೊದಲು ವೃಶ್ಚಿಕ ಮಾಸದಲ್ಲಿ ಹರಕೆಯ ನಾಯಿಗಳನ್ನು ತಯಾರಿಸಲಾಗುತ್ತದೆ. ಪುರಾತನದಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ. ಬೇತು ಗ್ರಾಮಕ್ಕೆ ಸಂಬAಧಿಸಿದ ೧೨ ಕುಳದವರು ೧೨ ಜೊತೆ ನಾಯಿಯನ್ನು ಹರಕೆಯ ರೂಪದಲ್ಲಿ ಇಲ್ಲಿ ಸಲ್ಲಿಸಬೇಕು ಎನ್ನುವದು ನಡೆದುಕೊಂಡು ಬಂದಿರುವ ಪದ್ಧತಿ. ಉಳಿದಂತೆ ಗ್ರಾಮದ ಜನ, ಭಕ್ತರು ಹರಕೆಯ ನಾಯಿ ಒಪ್ಪಿಸುತ್ತಾರೆ. ಒಂದು ಜೊತೆ ನಾಯಿ ತಯಾರಿಸಲು ನಿಗದಿತ ಮೊತ್ತವನ್ನು ನೀಡಬೇಕಾಗುತ್ತದೆ. ಹರಕೆಯ ಕಾರಣದಿಂದ ದೇಗುಲದ ಸುತ್ತಲೂ ಮಣ್ಣಿನ ನಾಯಿಗಳ ಪ್ರತಿಕೃತಿ ಇಲ್ಲಿಗೆ ಹೆಚ್ಚಿನ ಮೆರುಗು ನೀಡಿದೆ.

ಮಣ್ಣಿನ ನಾಯಿಗಳನ್ನು ಹಬ್ಬದ ಮೊದಲ ದಿನ ಬೆಳಗಿನ ಜಾವ ಯಾರೂ ಕಾಣದಂತೆ ಬೇತು ಮಂದ್ ಸಮೀಪದ ಕರ್ಪತಚ್ಚನ್ ನಡೆ ಎಂಬ ಸ್ಥಳಕ್ಕೆ ಸಾಗಿಸಲಾಗುತ್ತದೆ. ಅನಂತರ ಬೆಳಗಿನ ೧೧ ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅನಂತರ ಮೊದಲಿಗೆ ದೇವಾಲಯಕ್ಕೆ ಸಂಬAಧಿಸಿದವರು ಮತ್ತು ಆನಂತರ ಮಣ್ಣಿನ ನಾಯಿಯ ಹರಕೆ ಹೊತ್ತವರು ಸೇರಿದಂತೆ ಸಂಬAಧಪಟ್ಟ ಮುಖ್ಯಸ್ಥರೊಡನೆ ಮಣ್ಣಿನ ನಾಯಿಗಳನ್ನು ಶೇಖರಿಸಿಟ್ಟ ಸ್ಥಳಕ್ಕೆ ತೆರಳಿ ಹೂ ಗಂಧಗಳ ಲೇಪನಗಳಿಂದ ಅವುಗಳನ್ನು ಪೂಜಿಸಿ ದೇವಾಲಯಕ್ಕೆ ಹೊತ್ತು ತರಲಾಗುತ್ತದೆ. ಈ ಸಂದರ್ಭ ಯಾರೂ ಇವರ ಎದುರು ಕಾಣಿಸಿಕೊಳ್ಳಬಾರದು ಎಂಬ ನಂಬಿಕೆ ಕೂಡ ಇದೆ. ಅದಕ್ಕಾಗಿ ಈ ನಿಗದಿತ ಸಮಯದಲ್ಲಿ ನಾಯಿಗಳನ್ನು ಹೊತ್ತೊಯ್ಯುವ ಮಾರ್ಗದಲ್ಲಿ ಗ್ರಾಮಸ್ಥರು ಸುಳಿದಾಡುವದನ್ನು ನಿಷೇಧಿಸಲಾಗಿದೆ.

ಮಣ್ಣಿನ ಹರಕೆ ನಾಯಿಗೆ ರೊಟ್ಟಿ ತಯಾರಿಸುವ ವಿಶಿಷ್ಟö ಪದ್ಧತಿಯನ್ನು ನಾವು ಇಲ್ಲಿ ಕಾಣಬಹುದಾಗಿದೆ. ನಾಯಿ ಒಪ್ಪಿಸುವ ಒಂದು ದಿನ ಮುಂಚಿತವಾಗಿ ಸಂಬAಧಿಸಿದ ಕುಟುಂಬದ ಪುರುಷರು ದೇವಾಲಯದ ಸಮೀಪ ಕಲ್ಲಿನ ಒಲೆ ನಿರ್ಮಿಸಿ ಸೌದೆ ಸಂಗ್ರಹಿಸಿ ಇಡುವರು. ಈ ಕುಟುಂಬದ ಮಹಿಳೆಯರು ದೇವಾಲಯದ ಸಮೀಪದ ನಿಗದಿತ ಮನೆಯಲ್ಲಿ ರಾತ್ರಿ ತಂಗಿ ಮುಂಜಾನೆ ತಣ್ಣೀರು ಸ್ನಾನದೊಂದಿಗೆ ಶುದ್ಧದಿಂದ ಅಕ್ಕಿ ಕುಟ್ಟಿ ರೊಟ್ಟಿ ತಯಾರಿಸಿ ನಾಯಿ ಹೊತ್ತು ತರುವ ದಾರಿಯುದ್ದಕ್ಕೂ ತಮ್ಮನ್ನು ಯಾರಿಗೂ ಕಾಣಿಸಿಕೊಳ್ಳದಂತೆ ಬಾಳೆಲೆ ಚೂರಿನೊಂದಿಗೆ ರೊಟ್ಟಿ ಇಡುತ್ತಾರೆ. ಇದು ನಾಯಿಗಳಿಗೆ ನೈವೇಧ್ಯ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.

ತಮ್ಮ ಸಾಕು ಪ್ರಾಣಿಗಳಿಗೆ ತೊಂದರೆಯಾದರೆ, ಮನೆಯಲ್ಲಿ ನಾಯಿಗಳು ಸಮೃದ್ಧಿಯಾಗದಿದ್ದರೆ ಮಣ್ಣಿನ ನಾಯಿಯ ಹರಕೆಯನ್ನು ಮಾಡುವುದನ್ನು ಕಾಣಬಹುದಾಗಿದೆ ಹಾಗೂ ಕೆಲವರು ತೋಟ ಗದ್ದೆಗೂ, ತಮ್ಮ ಇಷ್ಟಾರ್ಥ ಸಿದ್ಧಿಗೂ ಮಣ್ಣಿನ ನಾಯಿಯ ಹರಕೆ ಮಾಡಿಕೊಳ್ಳುವದುಂಟು.

ಈ ದೇವಾಲಯಕ್ಕೆ ವರ್ಷಂಪ್ರತಿ ನೂರಾರು ನಾಯಿಗಳು ಹರಕೆಯ ರೂಪದಲ್ಲಿ ಬರುತ್ತಿದ್ದರೂ ದೇವಳದಲ್ಲಿರುವ ನಾಯಿಯ ಸಂಖ್ಯೆ ಹೆಚ್ಚಾಗದಿರುವದು ದೇವರ ಮಹಿಮೆ ಎನ್ನಲಾಗಿದೆ.

ಮಕ್ಕಿ ಶಾಸ್ತಾವು ದೇವಾಲಯ ಎಂದೊಡನೆ ನಮಗೆ ಕಾಣುವದು ದೊಡ್ಡ ಗುಡಿ-ಗೋಪುರಗಳಲ್ಲ; ಇವುಗಳ ಕಲ್ಪನೆಯೊಂದಿಗೆ ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಮೊದಲಿಗೆ ಕಸಿವಿಸಿಯಾಗುವದಂತೂ ಖಂಡಿತ. ಹಲವಾರು ಮೆಟ್ಟಿಲುಗಳನ್ನೇರಿ ಎತ್ತರದ ಪ್ರಶಾಂತವಾದ ಸಮತಟ್ಟು ಸ್ಥಳಕ್ಕೆ ಬಂದರೆ, ದಟ್ಟ ಕಾನನದ ಮಧ್ಯೆ ಸುಮಾರು ಐದು ಅಡಿ ಎತ್ತರದ ವೃತ್ತಾಕಾರದ ಕಟ್ಟೆ ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿ ಶಾಸ್ತಾವು ಸನ್ನಿಧಿ. ದೇವರಿಗೆ ಆಶ್ರಯವಿತ್ತಂತೆ ತೋರುವ ಒಂದು ಹಲಸಿನ ಮರ, ಸುತ್ತಲೂ ಸಹಸ್ರಾರು ಹರಕೆಯ ಮಣ್ಣಿನ ನಾಯಿಗಳು ಇದು ಮಕ್ಕಿ ಶಾಸ್ತಾವು ದೇವಾಲಯದ ಚಿತ್ರಣ.

ಈ ಹಬ್ಬವನ್ನು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಯೊಂದಿಗೆ ವಿಜೃಂಭಣೆಯಿAದ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರು `ಶಕ್ತಿ’ಗೆ ತಿಳಿಸಿದ್ದಾರೆ. - ಪಿ.ವಿ. ಪ್ರಭಾಕರ್, ನಾಪೋಕ್ಲು