ಕುಶಾಲನಗರ, ಡಿ. ೧೫: ಕುಶಾಲನಗರ ಪಟ್ಟಣದಲ್ಲಿ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಅಗತ್ಯಗಳಿಗೆ ಮೀಸಲಿರಿಸಿರುವ ರಸ್ತೆ, ಉದ್ಯಾನವನಗಳ ಸಂರಕ್ಷಣೆಗೆ ಪಂಚಾಯಿತಿ ಮೂಲಕ ಸ್ಥಳ ಪರಿಶೀಲಿಸಿ ಉದ್ಯಾನವನಗಳಿಗೆ ತಂತಿ ಬೇಲಿ ಅಳವಡಿಸಲು ಕ್ರಿಯಾಯೋಜನೆ ರೂಪಿಸುವ ಬಗ್ಗೆ ಕುಶಾಲನಗರ ಪುರಸಭೆಯ ಪ್ರಥಮ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕುಶಾಲನಗರ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಅಧ್ಯಕ್ಷರಾದ ಜಯವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಉದ್ಯಾನವನಗಳನ್ನು ಭೂಮಾಫಿಯ ದಂಧೆಯಿAದ ರಕ್ಷಣೆ ಮಾಡುವ ನಿಟ್ಟಿನಲ್ಲಿ ಖಾಸಗಿ ಮತ್ತು ಸರ್ಕಾರಿ ಸರ್ವೆ ಕಾರ್ಯ ನಡೆಸಿ ಶೀಘ್ರದಲ್ಲಿಯೇ ವರದಿ ತಯಾರಿಸಿ ಸರ್ಕಾರಿ ಆಸ್ತಿಯನ್ನು ಸಂರಕ್ಷಣೆ ಮಾಡುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಸ್ಥಳೀಯ ಬದ್ರುನಿಸ ಬಡಾವಣೆಯ ೨೦ ಸೆಂಟ್ ವಿಸ್ತೀರ್ಣದ ಉದ್ಯಾನವನ ನಾಪತ್ತೆಯಾಗಿದ್ದು, ಈ ಬಗ್ಗೆ ಸದಸ್ಯರಾದ ಪ್ರಮೋದ್ ಮುತ್ತಪ್ಪ, ವಿ.ಎಸ್ ಆನಂದಕುಮಾರ್ ಸಭೆಯ ಗಮನಕ್ಕೆ ತಂದರು. ಸದಸ್ಯರಾದ ಅಮೃತ್ರಾಜ್, ಎಂ.ವಿ. ನಾರಾಯಣ, ಕೆ.ಜಿ ಮನು ಮತ್ತಿತರರು ಮಾತನಾಡಿ, ಪಟ್ಟಣದ ಕೆಲವು ಬಡಾವಣೆಗಳ ದಾಖಲೆಗಳು ಸಂಪೂರ್ಣ ನಿಯಮಬಾಹಿರವಾಗಿದ್ದು, ಈ ಬಗ್ಗೆ ತನಿಖೆ ಅಗತ್ಯವಾಗಿದೆ. ಕಾನೂನು ಪ್ರಕಾರ ಅನಧಿಕೃತ ಬಡಾವಣೆಗಳ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ಬದ್ರುನಿಸ ಬಡಾವಣೆಯ ಉದ್ಯಾನವನದ ಬಗ್ಗೆ ಚಕ್ಬಂಧಿ ಪರಿಶೀಲಿಸಿ ಸ್ಥಳವನ್ನು ಖಾತ್ರಿಗೊಳಿಸಬೇಕು. ಪಟ್ಟಣದ ಬಡಾವಣೆಗಳ ದಾಖಲೆಗಳನ್ನು ಪಂಚಾಯಿತಿ ಆಡಳಿತ ಬಹಿರಂಗಗೊಳಿಸಬೇಕೆAದು ಸದಸ್ಯ ಕೆ.ಜಿ ಮನು ತಿಳಿಸಿದರು. ಸದಸ್ಯರಾದ ಕಲೀಮುಲ್ಲಾ ಅವರು ಮಾತನಾಡಿ, ಬದ್ರುನಿಸ ಬಡಾವಣೆಯ ಸರ್ವೇ ಕಾರ್ಯ ಮಾಡಿಸುವಂತೆ ತಿಳಿಸಿದರು. ಸಭೆಯಲ್ಲಿ ಜಾತಿ, ಧರ್ಮದ ವಿಚಾರ ಪ್ರಸ್ತಾಪ ಮಾಡಿದ ಸದಸ್ಯ ಅಮೃತ್ರಾಜ್ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯರಾದ ಪ್ರಮೋದ್ ಮುತ್ತಪ್ಪ ಮತ್ತಿತರರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಆದಷ್ಟು ಬೇಗ ಜಂಟಿ ಸರ್ವೇ ನಡೆಸಿ, ಉದ್ಯಾನವನದ ಜಾಗದ ಸಂರಕ್ಷಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಕಾನೂನು ಸಲಹೆಗಾರರಾದ ಆರ್.ಕೆ ನಾಗೇಂದ್ರ ಅವರು, ಪಂಚಾಯಿತಿ ಪರವಾಗಿ ವಾದಿಸುತ್ತಿದ್ದ ೫ ದಾವೆಗಳಿಂದ ನಿವೃತ್ತಿ ಆಗುವ ಬಗ್ಗೆ ಚರ್ಚೆ ನಡೆಯಿತು. ಈಗಾಗಲೇ ಪಂಚಾಯಿತಿಗೆ ಹೆಚ್ಚುವರಿ ವಕೀಲರನ್ನು ಕಾನೂನು ಸಲಹೆಗಾರರನ್ನಾಗಿ ನೇಮಿಸಲಾಗಿದ್ದು, ಇನ್ನೂ ೫ ಮಂದಿ ವಕೀಲರು ಅರ್ಜಿ ಸಲ್ಲಿಸಿರುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಮರ್ಥ ವಕೀಲರ ಸೇವೆಯನ್ನು ಪಡೆದು ಪಂಚಾಯಿತಿ ಆಸ್ತಿ ರಕ್ಷಣೆ ಮಾಡುವಂತೆ ಸದಸ್ಯರು ಸಭೆಯ ಗಮನಕ್ಕೆ ತಂದರು.
ಸಾಮಾನ್ಯ ಸಭೆಯಲ್ಲಿ ೨೦೨೨-೨೩ ನೇ ಸಾಲಿನ ಎಸ್ಎಫ್ಸಿ ಕುಡಿಯುವ ನೀರಿನ ಅನುದಾನದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅನುಮೋದನೆ ನೀಡಲಾಯಿತು. ಪಟ್ಟಣ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ಅಧ್ಯಯನ ಪ್ರವಾಸ ಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ನಗರ ವ್ಯಾಪ್ತಿಯಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಸಂದರ್ಭ ಪುರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಸಭೆ ನಿರ್ಣಯ ಕೈಗೊಂಡಿದೆ. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಂತ ಮನೆ ಇಲ್ಲದ ಪತ್ರಕರ್ತರಿಗೆ ನಿವೇಶನ ಒದಗಿಸಿ ಕೊಡುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಮೂಲಕ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಮನೆ ನೀಡುವ ಬಗ್ಗೆ ಸಭೆ ಒಪ್ಪಿಗೆ ನೀಡಿತು. ಸಭೆಯ ಪ್ರಾರಂಭದಲ್ಲಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಕಾರಣಕರ್ತರಾದ ರಾಜ್ಯ ಸರ್ಕಾರ, ಕ್ಷೇತ್ರ ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ಮತ್ತಿತರರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಸುರಯ್ಯಭಾನು, ಸೇರಿದಂತೆ ಸರ್ವ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್,ಕಾನೂನು ಸಲಹೆಗಾರರಾದ ಶಿವಮೂರ್ತಿ, ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.