ಮಡಿಕೇರಿ, ಡಿ. ೧೬: ಅವೈಜ್ಞಾನಿಕ ರೀತಿಯ ತಡೆಗೋಡೆ ನಿರ್ಮಾಣದಿಂದ ರಸ್ತೆಯ ಅಳತೆ ಕಡಿಮೆಯಾಗಿ ಕಿರಿದಾಗಿದೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ನಗರದ ಬ್ರಾಹ್ಮಣ ಬೀದಿ ನಿವಾಸಿಗಳು ಆರೋಪಿಸಿದ್ದು, ಸಮಸ್ಯೆ ಸರಿಪಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ಬ್ರಾಹ್ಮಣ ಬೀದಿಯಿಂದ ಸುದರ್ಶನ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಎಲ್ಲಾ ಕಡೆ ರಸ್ತೆ ಅಗಲೀಕರಣವಾಗುತ್ತಿದ್ದರೆ, ಇಲ್ಲಿ ಮಾತ್ರ ಕಿರಿದು ಮಾಡುವ ಕೆಲಸವಾಗುತ್ತಿದೆ. ಈ ರಸ್ತೆ ಜಲಾಶಯ ಬಡಾವಣೆ ಹಾಗೂ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಜನನಿಬಿಡ ಪ್ರದೇಶವಾಗಿರುವುದರಿಂದ ವಾಹನಗಳ ಹಾಗೂ ಜನರ ಸಂಚಾರ ಹೆಚ್ಚಿದೆ. ಇದನ್ನು ಅರಿತು ತಡೆಗೋಡೆ ನಿರ್ಮಿಸಬೇಕಾಗಿತ್ತು ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.