ಚೆಟ್ಟಳ್ಳಿ, ಡಿ. ೧೪: ಕೊಡಗರಹಳ್ಳಿ ಗ್ರಾ.ಪಂ ವ್ಯಾಪ್ತಿಯ ಅಂದಗೋವೆ ಪೈಸಾರಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಲಿದ್ದು, ರಸ್ತೆ ನಿರ್ಮಾಣಕ್ಕೆ ವ್ಯಕ್ತಿಯೋರ್ವರು ಬೇಲಿ ತೆರವುಗೊಳಿಸುತ್ತಿಲ್ಲ. ಕೂಡಲೇ ಗ್ರಾ.ಪಂ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಂದಗೋವೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೊಡಗರಹಳ್ಳಿಯ ಗ್ರಾ.ಪಂ.ನ ಅಂದಗೋವೆ ಪೈಸಾರಿಯಲ್ಲಿ ವ್ಯಕ್ತಿಯೋರ್ವರು, ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸ್ಥಳೀಯರು ತಮಗಿರುವ ಅಲ್ಪಸ್ವಲ್ಪ ಜಾಗದಲ್ಲಿ, ರಸ್ತೆಗಾಗಿ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಓರ್ವ ವ್ಯಕ್ತಿ ಮಾತ್ರ ರಸ್ತೆ ಜಾಗವನ್ನು ಬಿಡುತ್ತಿಲ್ಲ. ಸಂಬAಧಪಟ್ಟ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯಿತಿ ಆಡಳಿತ ಮಂಡಳಿ, ಕೂಡಲೇ ಬೇಲಿ ತೆರವುಗೊಳಿಸಿ ಸಾರ್ವಜನಿಕ ರಸ್ತೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿರುವ ಸ್ಥಳೀಯ ನಿವಾಸಿಗಳು, ಇಲ್ಲಿದಿದ್ದಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಮಾತನಾಡಿದ ಊರಿನ ಹಿರಿಯರಾದ ಹುಸೈನ್, ಅಂದಗೋವೆ ಪೈಸಾರಿ ಜಾಗದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ನಿವಾಸಿಗಳು ರಸ್ತೆಗಾಗಿ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಓರ್ವ ವ್ಯಕ್ತಿ ಮಾತ್ರ, ಇದಕ್ಕೆ ಸಹಕಾರ ನೀಡುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.