*ಗೋಣಿಕೊಪ್ಪ, ಡಿ. ೧೪: ಮೀನು ಕೃಷಿಯಿಂದ ಆರ್ಥಿಕವಾಗಿ ಸಬಲರಾಗಿ ಉತ್ತಮ ಜೀವನ ನಡೆಸಲು ಸಾಧ್ಯವಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮೀನು ಕೃಷಿಯಲ್ಲಿ ಮತ್ತಷ್ಟು ಉತ್ತೇಜಿತರಾಗಬೇಕು ಎಂದು ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಪೊನ್ನಂಪೇಟೆ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ತಾಲೂಕು ಮೀನುಗಾರಿಕೆಗೆ ಇಲಾಖೆ ವತಿಯಿಂದ ಮೀನುಗಾರಿಕೆ ಸಲಕರಣೆ ಕಿಟ್ಗಳನ್ನು ವಿತರಿಸಿ ಅವರು ಮಾತನಾಡಿದರು.
ಸರಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಮೀನು ಕೃಷಿಯನ್ನು ಉನ್ನತೀಕರಣಗೊಳಿಸುವುದರೊಂದಿಗೆ ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು. ತಾಲೂಕು ಮೀನುಗಾರಿಕಾ ಇಲಾಖೆಯ ಅಧಿಕಾರಿ ಸಚಿನ್ ಮಾತನಾಡಿ, ತಾಲೂಕಿನ ೧೦ ಪರಿಶಿಷ್ಟ ಜಾತಿ ಮತ್ತು ೪ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಉಚಿತ ಮೀನುಗಾರಿಕೆ ಸಲಕರಣೆ ಕಿಟ್ಗಳ ವಿತರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ತಾಲೂಕು ಬಗರ್ ಹುಕಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಕಾಡ್ಯಮಾಡ ಭರತ್, ತಾ.ಪಂ. ಮಾಜಿ ಅಧ್ಯಕ್ಷ ದಿನೇಶ್ ಇದ್ದರು.