ಗಡಿ ಘರ್ಷಣೆ ವಿಷಯ ಪ್ರಸ್ತಾಪ-ವಿಪಕ್ಷಗಳಿಂದ ಸಭಾತ್ಯಾಗ
ನವದೆಹಲಿ, ಡಿ. ೧೪ : ಭಾರತ-ಚೀನಾ ಗಡಿಯಲ್ಲಿ ತಾ. ೯ ರಂದು ನಡೆದ ಘರ್ಷಣೆಯ ವಿಷಯವಾಗಿ ಚರ್ಚೆ ನಡೆಸಲು ವಿಪಕ್ಷಗಳು ಸಂಸತ್ ಕಲಾಪದಲ್ಲಿ ಆಗ್ರಹಿಸಿವೆ. ಇದೇ ವಿಷಯವಾಗಿ ರಾಜ್ಯಸಭೆ ಕಲಾಪದಲ್ಲಿ ಕೋಲಾಹಲ ಉಂಟಾಗಿ ಚರ್ಚೆಯ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಲಾಪದಿಂದ ವಿಪಕ್ಷಗಳು ಹೊರನಡೆದಿವೆ. ರಾಜ್ಯಸಭೆಯ ವಿಪಕ್ಷ ನಾಯಕ ಹಾಗು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷಗಳು ಭಾರತದ ನೆಲದಲ್ಲಿ ಚೀನಾ ಅತಿಕ್ರಮಣದ ವಿಷಯವಾಗಿ ಸಂಸತ್ನಲ್ಲಿ ಚರ್ಚೆ ನಡೆಸಲು ಒತ್ತಾಯಿಸಿದ್ದವು, ಆದರೆ ಉಪಸಭಾಪತಿ ಹರಿವಂಶ್ ಅವರು ಚರ್ಚೆಗೆ ಸಂಬAಧಿಸಿದAತೆ ತಮಗೆ ಯಾವುದೇ ನೋಟೀಸ್ ಬಂದಿಲ್ಲ, ಆದ್ದರಿಂದ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಿದ್ದನ್ನು ಉಲ್ಲೇಖಿಸಿದ್ದಾರೆ. ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ, ಎನ್ಸಿಪಿ, ಆರ್ಜೆಡಿ, ಎಸ್ಪಿ, ಜೆಎಂಎA, ಶಿವಸೇನೆ ಸೇರಿದಂತೆ ವಿಪಕ್ಷಗಳ ಸಂಸದರು ಸಭಾತ್ಯಾಗಕ್ಕೂ ಮುನ್ನ ಘೋಷಣೆ ಕೂಗಿದರು. ತವಾಂಗ್ ಸೆಕ್ಟರ್ನಲ್ಲಿ ನಡೆದ ಭಾರತ-ಚೀನಾ ಸಿಬ್ಬಂದಿಗಳ ಘರ್ಷಣೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಹೇಳಿಕೆಯಲ್ಲಿ ಗಡಿಗೆ ಸಂಬAಧಿಸಿದ ವಾಸ್ತವ ಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ, ಘರ್ಷಣೆಯ ವಿಷಯದ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿದೆ ಎಂದು ವಿಪಕ್ಷ ನಾಯಕ ಖರ್ಗೆ ಆಗ್ರಹಿಸಿದ್ದಾರೆ. ಚೀನಾ ಖಾಲಿ ಜಾಗದಲ್ಲಿ ಸೇತುವೆಗಳನ್ನು ನಿರ್ಮಿಸಿದೆ ಎಂಬ ಮಾಹಿತಿ ಇದೆ, ಆರಂಭದಿAದಲೂ ಪೂರ್ಣ ಮಾಹಿತಿ ಪಡೆಯುವುದಕ್ಕೆ ನಾವು ಶ್ರಮಿಸುತ್ತಿದ್ದೇವೆ, ದೇಶಕ್ಕೆ ಗಡಿಯಲ್ಲಿನ ಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು ಎಂದು ಖರ್ಗೆ ಹೇಳಿದ್ದಾರೆ.
ರಾಜ್ಯದಲ್ಲಿ ಕಾಡಾನೆಗಳ ಸಂಖ್ಯೆ ಏರಿಕೆ
ಬೆಂಗಳೂರು, ಡಿ. ೧೪: ಆನೆ-ಹುಲಿಗಳು ಹೆಚ್ಚಾಗಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಈ ಸಂಘರ್ಷಗಳ ನಡುವೆಯೂ ರಾಜ್ಯದಲ್ಲಿ ಆನೆಗಳ ಗಣತಿಯಲ್ಲಿ ಹೆಚ್ಚಳಗಳು ಕಂಡು ಬಂದಿದೆ. ೨೦೧೭ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ೬,೦೪೯ ಆನೆಗಳಿದ್ದವು. ಇದೀಗ ಈ ಸಂಖ್ಯೆ ೭,೦೦೦-೭,೫೦೦ಕ್ಕೆ ಏರಿಕೆಯಾಗಿದೆ. ಇಷ್ಟೇ ಅಲ್ಲ, ೪೦೦ಕ್ಕೂ ಹೆಚ್ಚು ಆನೆಗಳು ಅರಣ್ಯ ಪ್ರದೇಶಗಳ ಹೊರಗೆ ಅಡ್ಡಾಡುತ್ತಿದ್ದು, ಈ ಪ್ರದೇಶವನ್ನು ತನ್ನ ವಾಸಸ್ಥಳಗಳನ್ನಾಗಿ ಮಾಡಿಕೊಂಡಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ೪೦೦೦ ಆನೆಗಳ ಪೈಕಿ ೨೦೦ ಆನೆಗಳು ಕೊಡಗು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿವೆ. ಹಾಸನದಲ್ಲಿ ೬೦-೭೦ ಆನೆಗಳಿದ್ದು, ೧೦೦-೧೫೦ ಆನೆಗಳು ಕೃಷಿ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ಆನೆಗಳು ನೆಲೆಯೂರಲು ಕಾಡಿನ ಸಾಮರ್ಥ್ಯ ಕೂಡ ಕಡಿಮೆಯಿದೆ. ಕೆಲವು ಪ್ರದೇಶಗಳಲ್ಲಿ, ಒಂದು ಆನೆಯು ೧-೨ ಚದರ ಕಿ.ಮೀ. ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಮಾನವ-ಪ್ರಾಣಿಗಳ ಸಂಘರ್ಷದ ಪ್ರಕರಣಗಳ ಸಮಸ್ಯೆಯನ್ನು ಪರಿಹರಿಸಲು, ರಾಜ್ಯ ಸರ್ಕಾರವು ಆನೆ ಸಂಘರ್ಷ ಕಾರ್ಯಪಡೆ ಮತ್ತು ಆನೆ ಕಾರಿಡಾರ್ ಎಂದು ಘೋಷಿಸಬಹುದಾದ ಪ್ರದೇಶಗಳನ್ನು ನಿರ್ಣಯಿಸಲು ವಿಶೇಷ ಸಮಿತಿಯನ್ನು ರಚಿಸಿದೆ. ಆನೆ ದಾಳಿಗೆ ಬಲಿಯಾದವರ ಕುಟುಂಬಗಳಿಗೆ ಹಾಗೂ ಬೆಳೆ ಹಾನಿ ಪರಿಹಾರವನ್ನು ಕೂಡ ಸರ್ಕಾರ ಹೆಚ್ಚಿಸಿದೆ. ಆದರೆ, ನಿಜವಾದ ಸಮಸ್ಯೆಗೆ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ಅಧಿಕಾರಿಗಳು ಮತ್ತು ತಜ್ಞರು ಹೇಳಿದ್ದಾರೆ.
ಅಂತರ್ಧರ್ಮ ವಿವಾಹ ಮಾಹಿತಿ ಸಂಗ್ರಹಕ್ಕೆ ಸಮಿತಿ
ಮುಂಬೈ, ಡಿ. ೧೪: ಅಂತರ್ಧರ್ಮ, ಅಂತರ್ಜಾತಿ ವಿವಾಹವಾಗಿ ಕುಟುಂಬಗಳಿAದ ದೂರವಾಗಿರುವ ಮಹಿಳೆಯರಿದ್ದರೆ ಅವರ ಮಾತೃ ಕುಟುಂಬದ ಬಗ್ಗೆ ಮಾಹಿತಿ ಸಂಗ್ರಹಿಸಲು ಮಹಾರಾಷ್ಟç ಸರ್ಕಾರ ಸಮಿತಿ ರಚನೆ ಮಾಡಿದೆ. ಈ ಸಮಿತಿ ೧೩ ಸದಸ್ಯರನ್ನು ಹೊಂದಿದ್ದು, ಅಂತರ್ಧರ್ಮ, ಅಂತರ್ಜಾತಿ ದಂಪತಿಗಳಿಗೆ ಸಂಬAಧಿಸಿದ ಕಲ್ಯಾಣ ಯೋಜನೆಗಳು ಮತ್ತು ಕಾನೂನುಗಳನ್ನು ಅಧ್ಯಯನ ಮಾಡಲಿದೆ. ಸರ್ಕಾರದ ಈ ನಡೆಯನ್ನು ಪ್ರತಿಗಾಮಿ ಎಂದು ಹೇಳಿರುವ ವಿಪಕ್ಷ ಎನ್ಸಿಪಿ ಜನರ ಖಾಸಗಿ ಜೀವನದ ಬಗ್ಗೆ ಗೂಢಚಾರಿಕೆ ಮಾಡುವ ಹಕ್ಕು ಏಕನಾಥ್ ಶಿಂಧೆ ಸರ್ಕಾರಕ್ಕೆ ಇಲ್ಲ ಎಂದು ಹೇಳಿದೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸರ್ಕಾರದ ನಿರ್ಣಯ ಪ್ರಕಟಗೊಂಡಿದ್ದು, ಸಚಿವರಾದ ಮಂಗಲ್ ಪ್ರಭಾತ್ ಲೋಧಾ ನೇತೃತ್ವದ ಅಂತರ್ಜಾತಿ/ಅAತರ್ಧರ್ಮ ವಿವಾಹ-ಕುಟುಂಬ ಸಮನ್ವಯ ಸಮಿತಿ ರಚನೆಯಾಗಿದೆ. ಈ ಸಮಿತಿ ಸದಸ್ಯರು ನಿಯಮಿತವಾಗಿ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರಾದ ಲೋಧಾ, ಶ್ರದ್ಧಾ ವಾಕರ್ ರೀತಿಯ ಪ್ರಕರಣಗಳು ಆಗದಂತೆ ಎಚ್ಚರ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ
ನವದೆಹಲಿ, ಡಿ. ೧೪: ಮೋಟಾರ್ ಬೈಕ್ನಲ್ಲಿ ಬಂದ ಅಪರಿಚಿತರು ೧೭ ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆ್ಯಸಿಡ್ ದಾಳಿ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಶಾಲಾ ಬಾಲಕಿಯ ಮೇಲೆ ದುಷ್ಕರ್ಮಿ ಆ್ಯಸಿಡ್ ಎರಚಿದ ಘಟನೆ ನಡೆದಿದೆ. ಬಾಲಕಿಯು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಇಬ್ಬರು ಕಿರಾತಕರು ಬೈಕ್ನಲ್ಲಿ ಬಂದಿದ್ದಾರೆ. ಈ ವೇಳೆ ಹಿಂದೆ ಕುಳಿತಿದ್ದ ಕಿರಾತಕ ಬಾಲಕಿಯ ಮುಖದ ಮೇಳೆ ಆ್ಯಸಿಡ್ ಎರಚಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ತೀವ್ರ ಗಾಯಗೊಂಡ ಸಂತ್ರಸ್ತೆಯನ್ನು ಸಫರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬAಧಿಸಿ ಪೊಲೀಸರು ಮತ್ತು ಡಿಸಿಪಿ ದ್ವಾರಕಾ ಆಸ್ಪತ್ರೆಗೆ ಹೋಗಿದ್ದು, ಬಾಲಕಿಯ ಕುಟುಂಬಸ್ಥರೊAದಿಗೆ ಮಾತನಾಡಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. ಘಟನೆಯ ವೇಳೆ ಸಂತ್ರಸ್ತ ಬಾಲಕಿ ತನ್ನ ತಂಗಿಯೊAದಿಗೆ ಇದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ. ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
೨ ವರ್ಷಗಳಲ್ಲಿ ೯ ಕಾಶ್ಮೀರಿ ಪಂಡಿತರ ಹತ್ಯೆ
ನವದೆಹಲಿ, ಡಿ. ೧೪: ಜಮ್ಮು ಮತ್ತು ಕಾಶ್ಮೀರದಲ್ಲಿ ೨೦೨೦ ರಿಂದ ಇಲ್ಲಿಯವರೆಗೆ ಒಂಬತ್ತು ಕಾಶ್ಮೀರಿ ಪಂಡಿತರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ೨೦೨೦ ರಲ್ಲಿ ಒಬ್ಬರು ಹಾಗೂ ೨೦೨೨ರಲ್ಲಿ ನಾಲ್ವರು ಕಾಶ್ಮೀರಿ ಪಂಡಿತರು ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ ಒಟ್ಟು ೯ ಕಾಶ್ಮೀರಿ ಪಂಡಿತರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ರೈ, ಕಳೆದ ಮೂರು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಗಾಗಿ ಕೇಂದ್ರ ಗೃಹ ಸಚಿವಾಲಯ ಸುಮಾರು ೨,೮೧೫ ಕೋಟಿ ರೂ. ಖರ್ಚು ಮಾಡಿದೆ ಎಂದು ಉತ್ತರಿಸಿದ್ದಾರೆ.
ದೆಹಲಿ : ಸಬ್ ರಿಜಿಸ್ಟಾçರ್ ಹುದ್ದೆಗಳಿಗೆ ಮಹಿಳೆಯರ ನೇಮಕ
ನವದೆಹಲಿ, ಡಿ. ೧೪: ಭ್ರಷ್ಟಾಚಾರ, ಕಡತ ವಿಳಂಬ ಮತ್ತು ಕಚೇರಿಗಳಲ್ಲಿ ಸಾಮಾನ್ಯ ಜನರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಲು ದೆಹಲಿಯ ಎಲ್ಲಾ ಸಬ್ ರಿಜಿಸ್ಟಾçರ್ ಹುದ್ದೆಗಳಿಗೆ ಮಹಿಳೆಯರನ್ನು ಮಾತ್ರ ನೇಮಕ ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೆನಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಸೂಚಿಸಿದ್ದಾರೆ. ಈ ಕ್ರಮದಿಂದಾಗಿ ಮೊದಲ ಬಾರಿಗೆ ದೆಹಲಿ ಸರ್ಕಾರದ ಕಂದಾಯ ಇಲಾಖೆಯಲ್ಲಿರುವ ಎಲ್ಲಾ ೨೨ ಸಬ್-ರಿಜಿಸ್ಟಾçರ್ಗಳು (ಎಸ್ಆರ್ಗಳು) ಮಹಿಳಾ ಅಧಿಕಾರಿಗಳೇ ಆಗಿರಲಿದ್ದಾರೆ. ಮಹಿಳಾ ಅಧಿಕಾರಿಗಳು ಸಬ್ ರಿಜಿಸ್ಟಾçರ್ ಕಚೇರಿಯ ಚುಕ್ಕಾಣಿ ಹಿಡಿಯುವ ಮೂಲಕ ಪ್ರಚಲಿತ ಭ್ರಷ್ಟಾಚಾರ, ವಿಳಂಬ ಮತ್ತು ಕಚೇರಿಗಳಲ್ಲಿ ಜನರಿಗೆ ಆಗುತ್ತಿರುವ ಕಿರುಕುಳವನ್ನು ತಗ್ಗಿಸಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.