ಮಡಿಕೇರಿ, ಡಿ. ೧೪: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ವತಿಯಿಂದ ಕೊಡಗಿನ ಎಲ್ಲಾ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರಿಗಾಗಿ ತಾ. ೧೮ ರಂದು ಆಟೋಟ ಸ್ಪರ್ಧೆ, ವೈದ್ಯಕೀಯ ತಪಾಸಣೆ ಮತ್ತು ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಂಘದ ಕೊಡಗು ಘಟಕದ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಹಾಗೂ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೮.೩೦ ಗಂಟೆಗೆ ನಗರದ ಓಂಕಾರೇಶ್ವರ ದೇವಾಲಯದಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದವರೆಗೆ ಕ್ರೀಡಾಜ್ಯೋತಿಯ ಮೆರವಣಿಗೆ ನಡೆಯಲಿದೆ. ಅತಿಥಿಗಳಾಗಿ ಮಾಜಿ ಸೈನಿಕರು, ಅಂತರರಾಷ್ಟಿçÃಯ ಪದಕ ವಿಜೇತ ಕ್ರೀಡಾಪಟುಗಳಾದ ಟಿ.ಜಿ. ನಾಣಯ್ಯ, ಕೆ.ಎ. ಅನಂತಕುಮಾರ್, ಹೆಚ್.ಎ. ಚಿಣ್ಣಪ್ಪ, ರಾಷ್ಟçಮಟ್ಟದ ಕ್ರೀಡಾಪಟು ಬಾರನ ರಂಗನಾಥ್ ಇವರುಗಳು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ ೯.೩೦ ಗಂಟೆಗೆ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಎಸ್‌ಪಿ ಎಂ.ಎ. ಅಯ್ಯಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ ೨.೩೦ ಗಂಟೆಗೆ ಮಾಜಿ ಸೈನಿಕರ ಬೃಹತ್ ಸಮಾವೇಶ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ. ಶಿವಣ್ಣ ಮತ್ತಿತರರು ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ವಹಿಸಲಿದ್ದಾರೆ. ಅದೇ ದಿನ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಅಗ್ನಿವೀರ್ ಆಕಾಂಕ್ಷಿಗಳಿಗೂ ದೇಹದಾರ್ಢ್ಯತೆ ಹಾಗೂ ವೈದ್ಯಕೀಯ ತಪಾಸಣೆ ನಡೆಯಲಿದೆ ಎಂದು ಅವರುಗಳು ಮಾಹಿತಿ ನೀಡಿದರು.
ಮಾಜಿ ಸೈನಿಕರಿಗೆ ನಿವೇಶನ ಹಾಗೂ ಜಮೀನಿಗೆ ಶಾಸಕರುಗಳಾದ ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರ ಮುಖಾಂತರ ಸಂಘ ಹೋರಾಟ ಮಾಡಿತ್ತು. ಅದರ ಫಲವಾಗಿ ಸರ್ಕಾರವು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ. ಶಾಸಕರುಗಳ ಸಹಕಾರಕ್ಕೆ ಸಂಘವು ಕೃತಜ್ಞತೆ ಸಲ್ಲಿಸುತ್ತದೆ ಎಂದು ಅವರುಗಳು ನುಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುಧೀರ್, ಮಡಿಕೇರಿ ನಗರ ಘಟಕದ ಅಧ್ಯಕ್ಷ ಪಾನಿಕುಟ್ಟಿರ ಕೆ. ಕುಟ್ಟಪ್ಪ, ಕ್ರೀಡಾ ಸಮಿತಿ ಸದಸ್ಯರುಗಳಾದ ಸಿ.ಜಿ. ತಿಮ್ಮಯ್ಯ, ನಾಟೋಳಂಡ ಸೋಮಯ್ಯ, ಗೌಡ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ತಳೂರ್ ಕಾಳಪ್ಪ ಉಪಸ್ಥಿತರಿದ್ದರು.