ಕುಶಾಲನಗರ, ಡಿ. ೧೩: ನದಿ, ಪ್ರಕೃತಿ ಮೂಲಗಳು ಕಲುಷಿತಗೊಂಡಲ್ಲಿ ಜನರ ಆರೋಗ್ಯ ಸಂಪೂರ್ಣ ಏರುಪೇರಾಗುವ ಆತಂಕ ಎದುರಾಗಲಿದೆ ಎಂದು ವೀರಶೈವ ಸಮಾಜದ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ. ಶಿವಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಸಹಯೋಗದೊಂದಿಗೆ ಜೀವನದಿ ಕಾವೇರಿಗೆ ನಡೆದ ೧೩೯ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನದಿ ಹಾಗೂ ಪರಿಸರಕ್ಕೆ ಧಕ್ಕೆ ಆಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ಆರತಿ ಬಳಗದ ಮೂಲಕ ನದಿ ಜಾಗೃತಿ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ವಿಷಯವಾಗಿದೆ ಎಂದರು.

ಈ ಸಂದರ್ಭ ಅಕ್ಕನ ಬಳಗದ ಪ್ರಮುಖರಾದ ಸೌಭಾಗ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿದರು. ಅರ್ಚಕ ಕೃಷ್ಣಮೂರ್ತಿ ಭಟ್ ಅವರು, ಅರ್ಚನೆ, ಅಷ್ಟೋತ್ತರಗಳನ್ನು ಪಠಿಸಿದ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು.

ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭಶಿವಮೂರ್ತಿ, ಬಿ. ನಟರಾಜ್, ಅಕ್ಕನ ಬಳಗದ ಮನು ಜಗದೀಶ್, ವಿಜಯಮ್ಮ, ನೇತ್ರ, ಮಮತ, ಲೇಖನ ಧರ್ಮೇಂಧ್ರ, ಕಾವೇರಿ ಆರತಿ ಬಳಗದ ಪ್ರಮುಖರು ಇದ್ದರು.