ಗೋಣಿಕೊಪ್ಪಲು, ಡಿ. ೧೪: ದ.ಕೊಡಗಿನ ಕಿರುಗೂರು ಗ್ರಾಮದ ಕುಟ್ಟಿಚಾತ ಚಾಮುಂಡಿ ಊರ್ ಮಂದ್ನಲ್ಲಿ ಪುತ್ತರಿ ಕೋಲಾಟ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊರಕುಟ್ಟಿರ, ಪೊಕ್ಕಳಿಚಂಡ, ಪಾನಿಕುಟ್ಟಿರ, ಕಾಕೇರ, ವಾಣಂಡ, ಚೂರಿರ ಹಾಗೂ ಚಾರಿಮಂಡ ಕುಟುಂಬದವರಿAದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೊಕ್ಕಳಿಚಂಡ ಕುಟುಂಬದ ರಾಣಿ ಜಾನಕಿ ತಂಡ ಸಾಂಪ್ರದಾಯಿಕ ಉಮ್ಮತ್ತಾಟ್ ಪ್ರದರ್ಶನ ನೀಡಿತು. ಹಿರಿಯ ಹಾಗೂ ಕಿರಿಯ ವಿಭಾಗದ ಪುರುಷರಿಗೆ ಹಗ್ಗಜಗ್ಗಾಟ ಪಂದ್ಯವನ್ನು ಆಯೋಜಿಸಲಾಗಿತ್ತು. ಹಿರಿಯರ ವಿಭಾಗದಲ್ಲಿ ಮತ್ತೂರು ತಂಡ ಹಾಗೂ ಕಿರಿಯರ ವಿಭಾಗದಲ್ಲಿ ಕಿರುಗೂರು ತಂಡ ಜಯಗಳಿಸಿತು. ಮಕ್ಕಳಿಗೆ ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ದವಸ ಭಂಡಾರದ ಅಧ್ಯಕ್ಷ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಕೊರಕುಟ್ಟಿರ ಸರ ಚಂಗಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಕಳೆದ ೪೦ ವರ್ಷಗಳಿಂದ ನಡೆಯುತ್ತಿದ್ದ ಊರ್ಮಂದ್ ಕಾರ್ಯಕ್ರಮವು ಕಾರಣಾಂತರಗಳಿAದ ನಿಂತುಹೋಗಿತ್ತು. ಅಕಾಡೆಮಿ ಸದಸ್ಯ ಸ್ಥಾನವಹಿಸಿದ ನಂತರ ಪ್ರಾರಂಭಿಸಲಾಗಿತ್ತು. ಕಳೆದೆರಡು ವರ್ಷಗಳ ಕೊರೊನಾದಿಂದ ಊರ್ಮಂದ್ ಕಾರ್ಯಕ್ರಮ ನಡೆದಿರಲಿಲ್ಲ. ಇದೀಗ ಸಾಂಪ್ರದಾಯಿಕವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಂದಿನ ಪೀಳಿಗೆಗೆ ಇಂತಹ ಕಾರ್ಯಕ್ರಮಗಳು ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಬೀಟಿವಾಡ ಕುಟ್ಟಿಚಾತ ಚಾಮುಂಡಿ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಕೊರಕುಟ್ಟಿರ ರಾಜಪ್ಪ, ಪೊಕ್ಕಳಿಚಂಡ ಪೂಣಚ್ಚ, ಪಾನಿಕುಟ್ಟಿರ ಕಾರ್ಯಪ್ಪ, ಪಾನಿಕುಟ್ಟಿರ ಪೂವಯ್ಯ, ಪೊಕ್ಕಳಿಚಂಡ ಪೂವಯ್ಯ, ಪಾನಿಕುಟ್ಟಿರ ಸಂದೀಪ್, ಕೊರಕುಟ್ಟಿರ ಕರುಂಬಯ್ಯ, ಚೂರಿರ ಅಪ್ಪಯ್ಯ, ಪೊಕ್ಕಳಿಚಂಡ ದಯಾನಂದ, ಚಾರಿಮಂಡ ಕುಶಾಲಪ್ಪ, ಚಾರಿಮಂಡ ದಿನು ದೇವಯ್ಯ, ಕಾಕೇರ ರವಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ದವಸ ಭಂಡಾರದ ಪದಾಧಿಕಾರಿಗಳು ಉಪಸ್ಥಿತರಿದ್ದರು.