ಮುಳ್ಳೂರು, ಡಿ. 12: ಸಮೀಪದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲೆಯ 5 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಆವಿಷ್ಕರಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಕರಗಳ ಹಾಗೂ ವಿಜ್ಞಾನ ಮಾದರಿ ವಸ್ತು ಪ್ರದರ್ಶನಗಳ ಮೇಳ ಮತ್ತು ಶಾಲೆಯ 3 ರಿಂದ 4ನೇ ತರಗತಿ ವಿದ್ಯಾರ್ಥಿಗಳ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ಶಾಲಾ ಆವರಣದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಆವಿಷ್ಕರಿಸಿದ ವಿವಿಧ ಪ್ರಯೋಗ ಪರಿಕರಗಳು, ಎಲೆಕ್ಟ್ರಾನಿಕ್ ಪರಿಕರ, ರಸಾಯನಿಕ ವಸ್ತುಗಳ ಪ್ರಾಯೋಗಿಕ ಪರಿಕರ, ವಿವಿಧ ತಂತ್ರ ಜ್ಞಾನದ ಪರಿಕರಗಳು ಸೇರಿದಂತೆ ವಿವಿಧ ವಿಜ್ಞಾನ ಮಾದರಿ ವಸ್ತುಗಳನ್ನು ಪ್ರದರ್ಶನದಲ್ಲಿಟ್ಟ ವಿದ್ಯಾರ್ಥಿಗಳು ಅವುಗಳ ಬಗ್ಗೆ ಮಾಹಿತಿ ನೀಡಿದರು. ಶಾಲೆಯ 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳು ತಮ್ಮ ಮನೆಗೆ ಸೇರಿದ ಜಾಗದಲ್ಲಿ ಬೆಳೆದ ವಿವಿಧ ಬಗೆಯ ತರಕಾರಿ, ಸೊಪ್ಪು, ಟೊಮೊಟೋ, ಗೆಡ್ಡೆ, ಗೆಣಸು ಮುಂತಾದ ಕಾಯಿ ಪಲ್ಲೆಗಳನ್ನು ತಂದು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯಲ್ಲಿ ಮಾರಾಟ ಮಾಡಿದರು. ಕೆಲವು ಮಕ್ಕಳು ಮನೆ ತೋಟ ಹಿತ್ತಲಿನಲ್ಲಿ ಬೆಳೆದ ಬಾಳೆಹಣ್ಣು, ಕಿತ್ತಳೆ ಇನ್ನು ಮುಂತಾದ ಹಣ್ಣು ಹಂಪಲುಗಳನ್ನು ತಂದು ಮಾರಾಟ ಮಾಡಿದರು. ಮಕ್ಕಳ ಸಂತೆಯಲ್ಲಿ ಅವರ ಮನೆಗಳಲ್ಲಿ ತಯಾರಿಸಿದ ವಿವಿಧ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದರು. ಪೋಷಕರು ಮತ್ತು ಗ್ರಾಹಕರು ಖರೀದಿಸಿದರು.